ನವದೆಹಲಿ: 2024ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ತಮ್ಮ ಪಕ್ಷವು ಕಾಂಗ್ರೆಸ್‌ಗೆ ಬೆಂಬಲ ನೀಡಲಿದೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಘೋಷಿಸಿದ್ದಾರೆ.
ಮುಂಬರುವ ಚುನಾವಣಾ ಹೋರಾಟದಲ್ಲಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಸಂಭಾವ್ಯ ಯೋಜನೆಯ ಕುರಿತು ಮಮತಾ ಬ್ಯಾನರ್ಜಿ ಮೊದಲ ಬಾರಿಗೆ ಟಿಎಂಸಿಯ ನಿಲುವನ್ನು ಬಹಿರಂಗಪಡಿಸಿದರು.
ಕಾಂಗ್ರೆಸ್ ಎಲ್ಲಿ ಪ್ರಬಲವಾಗಿದೆಯೋ ಅಲ್ಲಿ ಅವರು ಹೋರಾಡಲಿ. ನಾವು ಅವರಿಗೆ ಬೆಂಬಲ ನೀಡುತ್ತೇವೆ, ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅವರು ಇತರ ರಾಜಕೀಯ ಪಕ್ಷಗಳನ್ನು ಸಹ ಬೆಂಬಲಿಸಬೇಕು ಎಂದು ಟಿಎಂಸಿ ವರಿಷ್ಠರು ರಾಜ್ಯ ಕಾರ್ಯದರ್ಶಿ ಕಚೇರಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ಬೆಂಬಲವನ್ನು ಪಡೆಯಲು, ಕಾಂಗ್ರೆಸ್ ಇತರ ಪಕ್ಷಗಳಿಗೂ ಸಹಾಯ ಮಾಡಬೇಕು. ಸೀಟು ಹಂಚಿಕೆ ಕಾರ್ಯವಿಧಾನವು ಪ್ರಾದೇಶಿಕ ನಾಯಕರಿಗೆ ಅವರ ಭದ್ರಕೋಟೆಗಳಲ್ಲಿ ಅನುಕೂಲವನ್ನು ನೀಡುತ್ತದೆ. ಬಲಿಷ್ಠ ಪ್ರಾದೇಶಿಕ ಪಕ್ಷಗಳಿಗೆ ಆದ್ಯತೆ ನೀಡಬೇಕು ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್‌ನ ಭರ್ಜರಿ ಗೆಲುವು ತೃಣಮೂಲ ಕಾಂಗ್ರೆಸ್‌ನ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮನಸ್ಸನ್ನು ಬದಲಾಯಿಸಿದೆ.