ಮುಂಬೈ: ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಮಮತಾ ಕುಲಕರ್ಣಿ ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಸರಿದಿದ್ದಾರೆ. ಕನ್ನಡದ ವಿಷ್ಣು ವಿಜಯ ಸಿನಿಮಾದಲ್ಲಿಯೂ ಅಭಿನಯಿಸಿದ್ದ ಮಮತಾ ಕುಲಕರ್ಣಿ ಈಗ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗಿಯಾಗಿರುವ ಮಮತಾ ಕುಲಕರ್ಣಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಬಳಿಕ ಸತಃ ತಮ್ಮ ಪಿಂಡಪ್ರದಾನ ಮಾಡುವ ಮೂಲಕ ಜೂನಾ ಅಖಾಡದ ಅಡಿ ಕಾರ್ಯನಿರ್ವಹಿಸುವ ಕಿನ್ನರ ಅಖಾಡಕ್ಕೆ ಸೇರಿಕೊಂಡದ್ದು, ಮಹಾಮಂಡಲೇಶ್ವರಿಯಾಗಿದ್ದಾರೆ. ಅವರಿಗೆ ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮೀ ನಾರಾಯಣ ತ್ರಿಪಾಠಿ ದೀಕ್ಷೆ ನೀಡಿದರು.
ಕಳೆದ ಎರಡು ವರ್ಷಗಳಿಂದ ಜೂನಾ ಅಖಾಡದ ಸಂಪರ್ಕದಲ್ಲಿದ್ದ ಮಮತಾ ಕುಲಕರ್ಣಿ ಇದೀಗ ಅದೇ ಅಖಾಡದ ಭಾಗವಾಗಲು ನಿರ್ಧರಿಸಿದ್ದಾರೆ. ಸನ್ಯಾಸ ದೀಕ್ಷೆ ಬಳಿಕ ಮಮತಾ ಕುಲಕರ್ಣಿ ‘ಮಾಯಿ ಮಮತಾ ನಂದಗಿರಿ’ ಎಂದು ಹೆಸರು ಬದಲಿಸಿಕೊಂಡಿದ್ದಾರೆ. 90ರ ದಶಕದಲ್ಲಿ ಬಾಲಿವುಡ್, ಕನ್ನಡ, ತಮಿಳು ಸೇರಿದಂತೆ ಹಲವು ಚಿತ್ರರಂಗದಲ್ಲಿ ನಟಿಸಿದ್ದ ಮಮತಾ ಕುಲಕರ್ಣಿ, ವಿಕಿ ಗೋಸ್ವಾಮಿಯನ್ನು ವಿವಾಹವಾಗಿದ್ದರು. ಕೆಲ ವರ್ಷ ದುಬೈ, ಆಫ್ರಿಕಾ, ಅಮೆರಿಕಾ ಸೇರಿದಂತೆ ವಿದೇಶಗಳಲ್ಲಿ ವಾಸವಾಗಿದ್ದ ಮಮತಾ, ಮಾದಕವಸ್ತು ಪ್ರಕರಣದಲ್ಲಿ ಅಮೆರಿಕಾ ತನಿಖಾ ಸಂಸ್ಥೆಯಿಂದ ತನಿಖೆಗೂ ಒಳಪಟ್ಟಿದ್ದರು. ಬಳಿಕ ಮುಂಬೈಗೆ ವಾಪಾಸ್ ಆಗಿದ್ದ ಮಮತಾ, ಆಧ್ಯಾತ್ಮದತ್ತ ಒಲವು ಹೊಂದಿದ್ದರು. ಇದೀಗ ಸಾದ್ವಿಯಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಿ ಮಹಾಕುಂಭಮೇಳದಲ್ಲಿ ಧಾರ್ಮಿಕ ಕಾರ್ಯಗಳಲ್ಲಿ, ಆಧ್ಯಾತ್ಮಿಕ ಹಾದಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಬಾಲಿವುಡ್ ನ ಬೋಲ್ಡ್ ತಾರೆಯಾಗಿದ್ದ ಮಮತಾ ಕುಲಕರ್ಣಿ ಈಗ ಸನ್ಯಾಸ ದೀಕ್ಷೆ ಪಡೆದು ಆಧ್ಯಾತ್ಮದತ್ತ ಬದುಕು ಬದಲಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.