ಕೋಲ್ಕೊತಾ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಪೊಲೀಸರಿಂದ ವರದಿ ಸಲ್ಲಿಕೆಯಾಗಿದ್ದು, ಇದು ದಾಳಿಯಲ್ಲ, ಆಕಸ್ಮಿಕ ಹೇಳಲಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ಸೃಷ್ಟಿಸಿದೆ. ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿತ್ತು. ಆಸ್ಪತ್ರೆಗೆ ದಾಖಲಾದ ಮಮತಾ ಬ್ಯಾನರ್ಜಿ ಗಾಲಿ ಕುರ್ಚಿಯಲ್ಲೇ ಕುಳಿತು ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.
ಆದರೆ, ಮಮತಾ ಬ್ಯಾನರ್ಜಿ ಅವರ ಮೇಲೆ ಹಲ್ಲೆ ನಡೆದಿಲ್ಲ. ಆಕಸ್ಮಿಕ ಅವಘಡದಲ್ಲಿ ಅವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಚುನಾವಣಾ ಆಯೋಗಕ್ಕೆ ಪೊಲೀಸರು ಈ ಕುರಿತಾಗಿ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದು, ಇದು ಪೂರ್ವ ನಿಯೋಜಿತ ಕೃತ್ಯ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಭದ್ರತೆ ಕೊರತೆ ಕಾರಣದಿಂದ ಐದಾರು ಮಂದಿ ಗುಂಪುಕಟ್ಟಿಕೊಂಡು ಸಿಎಂ ಬಳಿ ಹೋಗಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳು ಕೂಡ ಇಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಘಟನೆಯ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.