ಪಶ್ಚಿಮ ಬಂಗಾಳ ಸಿಎಂ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕೃಷ್ಣನಗರ ಸಂಸದೆ ಮಹುವಾ ಮೊಯಿತ್ರಾಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಟಿಕೆಟ್ ಹಂಚಿಕೆ ವಿಚಾರವಾಗಿ ಪಕ್ಷದ ತೀರ್ಮಾನ ಅಂತಿಮ ಎಂದು ಹೇಳುವ ಮೂಲಕ ಮೊಯಿತ್ರಾರನ್ನು ತರಾಟೆಗೆ ತೆಗೆದುಕೊಂಡರು. ನಾಡಿಯಾ ಜಿಲ್ಲೆಯಲ್ಲಿ ನಗರಸಭೆ ಚುನಾವಣೆಗೂ ಮುಂಚಿತವಾಗಿ ಟಿಎಂಸಿಯಲ್ಲಿ ನಡೆಯುತ್ತಿರುವ ಆಂತರಿಕ ಕಲಹಗಳ ನಡುವೆಯೇ ಈ ಬೆಳವಣಿಗೆ ಕಂಡುಬಂದಿದೆ.
ಮೊಯಿತ್ರಾ, ನಿಮಗೆ ನಾನು ಒಂದು ಸ್ಪಷ್ಟ ಸಂದೇಶ ನೀಡುತ್ತಿದ್ದೇನೆ. ಯಾರ ವಿರುದ್ಧ ಯಾರಿದ್ದಾರೆ ಎಂಬುದನ್ನು ವೀಕ್ಷಿಸುವ ಅಗತ್ಯ ನನಗಿಲ್ಲ. ಯಾರಿಗೂ ಒಬ್ಬರಿಗೆ ಒಬ್ಬ ವ್ಯಕ್ತಿ ಇಷ್ಟವಾಗಿಲ್ಲ ಅಂದರೆ ಅವನು ಅಥವಾ ಅವಳು ಕೆಲವರನ್ನು ಯುಟ್ಯೂಬ್ ಅಥವಾ ನ್ಯೂಸ್ ಪೇಪರ್ಗಳಿಗೆ ಸುದ್ದಿಗಾಗಿ ಕಳುಹಿಸುತ್ತಾರೆ. ಈ ರೀತಿಯ ರಾಜಕೀಯ ಒಂದು ದಿನ ನಡೆಯಬಹುದು ಆದರೆ ಯಾವಾಗಲೂ ನಡೆಯಲು ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ ರಾಜ್ಯ ಸರ್ಕಾರ ನಡೆಸಿದ ಆಡಳಿತಾತ್ಮಕ ಸಭೆಯಲ್ಲಿ ಹೇಳಿದ್ದಾರೆ.
ನಾಡಿಯಾ ಜಿಲ್ಲೆಯ ಪಕ್ಷದ ಅಧ್ಯಕ್ಷೆ ಸ್ಥಾನದಿಂದ ಮೊಯಿತ್ರಾರನ್ನು ಕಳೆದ ಕೆಲ ದಿನಗಳ ಹಿಂದಷ್ಟೇ ಕೆಳಗಿಳಿಸಲಾಗಿತ್ತು. ಮೊಯಿತ್ರಾ ಹಾಜರಿದ್ದ ಸಭೆಯಲ್ಲಿಯೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಈ ಮಾತುಗಳನ್ನು ಆಡಿದ್ದಾರೆ.
ಒಬ್ಬ ವ್ಯಕ್ತಿ ಒಂದು ಸ್ಥಾನದಲ್ಲಿ ಶಾಶ್ವತವಾಗಿ ಇರುತ್ತಾನೆ ಎಂದುಕೊಳ್ಳುವುದು ಸರಿಯಲ್ಲ. ಚುನಾವಣೆ ಬಂದಾಗ ಯಾರು ಸ್ಪರ್ಧಿಸಬೇಕು ಅನ್ನೋದನ್ನು ಪಕ್ಷ ನಿರ್ಧರಿಸುತ್ತದೆ. ಇಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶವಿಲ್ಲ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಹುವಾ ಮೊಯಿತ್ರಾ ಪಕ್ಷದ ಜೊತೆ ನಾನು ಒಗ್ಗಟ್ಟಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.