ಕೋಲ್ಕತ್ತಾ: ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಎರಡನೇ ಅವಧಿಗೆ ವಂಚಿತರಾಗಿರುವುದು ಆಘಾತ ತಂದಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.
ಉತ್ತರ ಬಂಗಾಳ ಪ್ರವಾಸಕ್ಕೆ ತೆರಳುವ ಮುನ್ನ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ಗಂಗೂಲಿ ಅವರು ಐಸಿಸಿ ಮುಖ್ಯಸ್ಥರ ಚುನಾವಣೆಗೆ ಸ್ಪರ್ಧಿಸಲು ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುವುದಾಗಿ ಹೇಳಿದರು.
ಎಲ್ಲಾ ದೇಶವಾಸಿಗಳ ಪರವಾಗಿ ನಾನು ಸೌರವ್ ಗಂಗೂಲಿ ನಮ್ಮ ಹೆಮ್ಮೆ ಎಂದು ಹೇಳುತ್ತೇನೆ. ಸೌರವ್ ಅವರು ಸಮರ್ಥ ಆಡಳಿತಗಾರ ಎಂದು ಸಾಬೀತುಪಡಿಸಿದ್ದಾರೆ. ಅವರಿಗೆ ಅನ್ಯಾಯವಾಗಿದೆ. ಐಸಿಸಿ ಮುಖ್ಯಸ್ಥರ ಚುನಾವಣೆಯಲ್ಲಿ ಗಂಗೂಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ನಾನು ಪ್ರಧಾನಿಗೆ ಮನವಿ ಮಾಡುತ್ತೇನೆ. ಈ ವಿಷಯದಲ್ಲಿ ಯಾವುದೇ ರಾಜಕೀಯ ಮಾಡಬಾರದು ಎಂದು ಹೇಳಿದರು.