
ಬೆಂಗಳೂರು: ಸಹಕಾರ ಸಚಿವ ಕೆ.ಎನ್.ರಾಜಣ್ಣ ಮೇಲೆ ಹನಿಟ್ರ‍್ಯಾಪ್ ಗೆ ಯತ್ನ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವಿಧಾನಮಂಡಲ ಅಧಿವೇಶನದಲ್ಲಿಯೂ ಈ ವಿಚಾರ ಗದ್ದಲ-ಕೋಲಾಹಲಕ್ಕೆ ಕಾರಣವಾಗಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಕಾವೇರಿ ನಿವಾಸಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮೊಣಕಾಲು ನೋನಿನಿಂದ ಬಳಲುತ್ತಿರುವ ಸಿಎಂ ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.
ಈ ವೇಳೆ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಇನ್ನು ಸಚಿವರ ಮೇಲೆ ಹನಿಟ್ರ್ಯಾಪ್ ಯತ್ನ ಪ್ರಕರಣ, ಉನ್ನತ ಮಟ್ಟದ ತನಿಖೆ ವಿಚಾರವಾಗಿಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.