ನವದೆಹಲಿ: ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಖಂಡಿಸಿ ಕಾಂಗ್ರೆಸ್ ಸೇರಿದಂತೆ ವಿಪಕ್ಷ ನಾಯಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಸಂಸತ್ ಮಾರ್ಗ್ ನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ವಿಪಕ್ಷ ನಾಯಕರು ಕೈಗೆ ಕಪ್ಪುಪಟ್ಟಿ ಧರಿಸಿ ಭಾಗವಹಿಸಿದ್ದರೆ, ರಾಜ್ಯ ಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಪ್ಪು ಕುರ್ತಾ, ಕಪ್ಪು ರುಮಾಲು, ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ನಿನ್ನೆಯಷ್ಟೇ ಇಡಿ ವಿಚಾರಣೆ ಎದುರಿಸಿದ್ದ ಮಲ್ಲಿಕಾರ್ಜುನ ಖರ್ಗೆಯವರು ಇಂದು ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಫುಲ್ ಬ್ಲ್ಯಾಕ್ ಧಿರಿಸಿನಲ್ಲಿ ಬ್ಲ್ಯಾಕ್ ರುಮಾಲು ಧರಿಸಿ ಬಂದ ಖರ್ಗೆ ಅವರನ್ನು ಕಂಡು ಅರೇ ಕ್ಷಣ ಕಾಂಗ್ರೆಸ್ ನಾಯಕರು ಶಾಕ್ ಆಗಿದ್ದು, ವಿಪಕ್ಷ ನಾಯಕನ ಪ್ರತಿಭಟನೆ ವಿಶೇಷ ರೀತಿಯಲ್ಲಿ ಗಮನ ಸೆಳೆಯಿತು.