ನವದೆಹಲಿ: ದೆಹಲಿಯಲ್ಲಿರುವ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿಯನ್ನು ಪ್ರಧಾನಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಎಂದು ಮರುನಾಮಕರಣ ಮಾಡಲಾಗಿದೆ.
ಬಿಜೆಪಿಯ ಈ ಕ್ರಮವನ್ನು ಕಾಂಗ್ರೆಸ್ ಕಟುವಾಗಿ ಟೇಕಿಸಿದೆ. ಮರುನಾಮಕರಣ ವಿಚಾರ ಉಭಯ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ದೇಶದ ಮೊದಲ ಪ್ರಧಾನಿ ನೆಹರೂ ನೀಡಿದ ಕೊಡುಗೆಗಳನ್ನು ಮರೆಮಾಚಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಯತ್ನಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಇತಿಹಾಸವೇ ಇಲ್ಲದವರು ಬೇರೆಯವರ ಇತಿಹಾಸ ಅಳಿಸಲು ಹೊರಟಿದ್ದಾರೆ. ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರನ್ನು ಬದಲಾವಣೆ ಮಾಡಿರುವುದು ದುರದೃಷ್ಟಕರ. ಇಂತಹ ಪ್ರಯತ್ನ ಸರಿಯಲ್ಲ. ಇದರಿಂದ ಆಧುನಿಕ ಭಾರತದ ವಾಸ್ತುಶಿಲ್ಪಿ ಮತ್ತು ಪ್ರಜಾಪ್ರಭುತ್ವದ ನಿರ್ಭೀತ ಕಾವಲುಗಾರ ನೆಹರೂ ಅವರ ವ್ಯಕ್ತಿತ್ವವನ್ನು ಕಡೆಗಣಿಸುವಂತೆ ಮಾಡಲಾಗದು. ಇದು ಬಿಜೆಪಿ ಮತ್ತು ಆರ್.ಎಸ್.ಎಸ್. ನ ಕೀಳು ಮನಸ್ಥಿತಿ ಮತ್ತು ಸರ್ವಾಧಿಕಾರಿ ಧೋರಣೆ ಬಿಂಬಿಸುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.