ನವದೆಹಲಿ: ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಪೈಪೋಟಿ ನಡೆಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ವೇಳೆ ಬಿಗಿಪಟ್ಟು ಹಿಡಿದಿದ್ದಾರೆ. ತಮ್ಮನ್ನು ಮುಖ್ಯಮಂತ್ರಿ ಮಾಡಲು ಕಾರಣಗಳನ್ನು ಕೊಟ್ಟಿದ್ದಾರೆ.
ಹೈಕಮಾಂಡ್ ನಾಯಕರಲ್ಲಿ ಕೆಲವರು ಸಿದ್ದರಾಮಯ್ಯ ಮತ್ತೆ ಕೆಲವರು ಡಿ.ಕೆ. ಶಿವಕುಮಾರ್ ಪರವಾಗಿದ್ದಾರೆ. ಉಭಯ ನಾಯಕರು ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿರುವುದರಿಂದ ಹೈಕಮಾಂಡ್ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ.
ಇದೆ ವೇಳೆ ಡಿ.ಕೆ. ಶಿವಕುಮಾರ್ ಹೊಸ ದಾಳ ಉರುಳಿಸಿದ್ದಾರೆ. ನನ್ನನ್ನು ಮುಖ್ಯಮಂತ್ರಿ ಮಾಡಿ ಇಲ್ಲವೇ ನೀವೇ ಮುಖ್ಯಮಂತ್ರಿಯಾಗಿ ಎಂದು ಖರ್ಗೆಯವರಿಗೆ ಡಿಕೆಶಿ ಹೇಳಿದ್ದಾರೆ. ಇದರಿಂದ ರಾಜ್ಯಕ್ಕೆ ಮೊದಲ ದಲಿತ ಸಿಎಂ ದೊರೆತಂತಾಗುತ್ತದೆ. ನೀವು ಮುಖ್ಯಮಂತ್ರಿಯಾದರೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಖರ್ಗೆಯವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಪಕ್ಷ ಸಂಕಷ್ಟದಲ್ಲಿದ್ದಾಗ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಸಂಘಟನೆ ಮಾಡಿದ್ದೇನೆ. ಮುಖ್ಯಮಂತ್ರಿ ಹುದ್ದೆಯನ್ನು ನನಗೆ ನೀಡಬೇಕು. ಇಲ್ಲವಾದರೆ ನೀವು ಸಿಎಂ ಆಗಿ. ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ನನಗೆ ಯಾವ ಹುದ್ದೆಯೂ ಬೇಡ, ಶಾಸಕನಾಗಿ ಮುಂದುವರೆಯುತ್ತೇನೆ. ಹಾಗೆಂದು ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವುದಾಗಲಿ, ಬಂಡಾಯ ಸಾರುವುದಾಗಲಿ ಮಾಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಖರ್ಗೆಯವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಒಕ್ಕಲಿಗರು, ಲಿಂಗಾಯಿತರು, ದಲಿತ ಮತ ಕ್ರೋಢೀಕರಣದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ಒಕ್ಕಲಿಗರು ಕಾಂಗ್ರೆಸ್ ಪರ ನಿಲ್ಲುವಲ್ಲಿ ನನ್ನ ಕೊಡುಗೆ ಇದ್ದು, ನಿಮ್ಮಿಂದಾಗಿ ದಲಿತ ಸಮುದಾಯ ಕಾಂಗ್ರೆಸ್ ಕಡೆ ವಾಲಿದೆ. ಹೀಗಾಗಿ ಪಕ್ಷ ಅಧಿಕಾರಕ್ಕೆ ಬರುವಲ್ಲಿ ನಮ್ಮ ಕೊಡುಗೆ ಹೆಚ್ಚು. ನನಗೆ ಮುಖ್ಯಮಂತ್ರಿ ಸ್ಥಾನ ನೀಡಿ, ಇಲ್ಲವೇ ನೀವು ಮುಖ್ಯಮಂತ್ರಿಯಾಗಿ ಎಂದು ಖರ್ಗೆಯವರಿಗೆ ಡಿಕೆಶಿ ಹೇಳಿದ್ದಾರೆ ಎನ್ನಲಾಗಿದೆ.