ಬೆಂಗಳೂರು: ಸಿಎಂ ಸಿದ್ದರಾಮಯ್ಯ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೂ ಸಂಕಷ್ಟ ಎದುರಾಗಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಕುಟುಂಬದ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಖರ್ಗೆ ಕುಟುಂಬಕ್ಕೆ ಸೇರಿದ ಟ್ರಸ್ಟ್ ಗೆ ಐದು ಎಕರೆ ಸಿಎ ಸೈಟ್ ರೂಪದಲ್ಲಿ ನಿವೇಶನ ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರ ವಿರುದ್ಧ 394 ಪುಟಗಳ ದಾಖಲೆ ಸಮೇತ ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ದೇವನಹಳ್ಳಿಯಲ್ಲಿರುವ ಏರೋಸ್ಪೇಸ್ ಪಾರ್ಕ್ ಸಮೀಪದಲ್ಲಿ ಐದು ಎಕರೆ ಭೂಮಿಯನ್ನು ಕೆಐಎಡಿಬಿಯಿಂದ ಸಿಎ ಸೈಟ್ ಹೆಸರಲ್ಲಿ ಮಂಜೂರು ಮಾಡಿರುವ ಆರೋಪ ಕೆಳಿಬಂದಿದೆ. ಮಲ್ಲಿಕಾರ್ಜುನ ಖರ್ಗೆ, ಪುತ್ರ ಪ್ರಿಯಾಂಕ್ ಖರ್ಗೆ, ರಾಹುಲ್ ಖರ್ಗೆ, ಅಳಿಯ ರಾಧಾಕೃಷ್ಣ ಹಾಗೂ ಕುಟುಂಬದ ಹೆದ್ಸರಲ್ಲಿ ಸಿದ್ಧಾರ್ಥ್ ವಿಹಾರ್ ಟ್ರಸ್ಟ್ ಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಕ್ರಮವಾಗಿ ಎರಡು ಬಾರಿ ಸರ್ಕಾರಿ ಭೂಮಿ ಪರಭಾರೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಅಕ್ರಮದಲ್ಲಿ ಸಚಿವ ಎಂ.ಬಿ.ಪಾಟೀಲ್ ಹಾಗೂ ಐಎ ಎಸ್ ಅಧಿಕಾರಿಗಳೂ ಭಾಗಿಯಾಗಿದ್ದಾರೆ ಎಂದು ಎನ್. ಆರ್.ರಮೇಶ್ ದೂರಿನಲ್ಲಿ ಉಲ್ಲೇಖಿಸಿದ್ದು, ಒಟ್ಟು 7ಜನರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.