ಮಾಲಿಯಾದ 26 ವರ್ಷದ ಮಹಿಳೆ ಹಲೀಮಾ ಸಿಸ್ಸೆ ಹೆಸರಿನ ಈಕೆ ಮೇ ತಿಂಗಳಿನಲ್ಲಿ ಒಂದೇ ಬಾರಿಗೆ ಒಂಬತ್ತು ಮಕ್ಕಳಿಗೆ ಜನ್ಮವಿತ್ತು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಮೊರಕ್ಕೋದ ಕಸಾಬ್ಲಾಂಕಾದ ಐನ್ ಬೋರ್ಜಾ ಕ್ಲಿನಿಕ್‌ನಲ್ಲಿ ಸಿಸ್ಸೆಗೆ ಡೆಲಿವರಿ ಮಾಡಿದ್ದಾರೆ.
ಮೊದಲಿಗೆ ಸಿಸ್ಸೆ ಏಳು ಮಕ್ಕಳಿಗೆ ಜನ್ಮ ನೀಡುವ ನಿರೀಕ್ಷೆ ಇತ್ತು. ಆದರೆ ಮಾಲಿಯಿಂದ ಮೊರೊಕ್ಕೋಗೆ ಸಿ-ಸೆಕ್ಷನ್‌ಗಾಗಿ ಕರೆ ತಂದ ಬಳಿಕ ಒಂಬತ್ತು ಮಕ್ಕಳನ್ನು ಭೂಮಿಗೆ ತಂದಿದ್ದಾರೆ.
ಭೂಮಿಗೆ ಬಂದ ಮೊದಲ ಕೆಲ ತಿಂಗಳುಗಳನ್ನು ಈ ಮಕ್ಕಳು ಐಸಿಯುನಲ್ಲಿ ಕಳೆಯಬೇಕಾಗಿ ಬಂದಿದೆ. ಆಗಸ್ಟ್‌ನಲ್ಲಿ ಈ ಮಕ್ಕಳನ್ನು ಇನ್‌ಕ್ಯೂಬೇಟರ್‌ಗಳಿಂದ ಹೊರತೆಗೆಯಲಾಗಿದ್ದರೂ, ವೈದ್ಯರು ಇನ್ನೂ ಇವುಗಳ ಶುಶ್ರೂಷೆ ಮಾಡುತ್ತಿದ್ದಾರೆ. ಮಹಿಳೆಯ ಕುಟುಂಬವು ಆಸ್ಪತ್ರೆ ಬಳಿಯ ಮನೆಯೊಂದರಲ್ಲಿ ವಾಸಿಸುತ್ತಿದೆ.
ತನ್ನೆಲ್ಲಾ ಮಕ್ಕಳಿಗೆ ದಿನವೊಂದಕ್ಕೆ ಆರು ಲೀಟರ್ ಹಾಲುಣಿಸುವ ಸಿಸ್ಸೆ, ಒಂದೇ ದಿನದಲ್ಲಿ 100 ಡೈಪರ್‌ಗಳನ್ನು ಬದಲಿಸಬೇಕಾಗಿ ಬಂದಿದೆ. ಆರಂಭದಲ್ಲಿ ಮಕ್ಕಳ ಪಾಲನೆಯಿಂದ ದಣಿಯುತ್ತಿದ್ದ ಸಿಸ್ಸೆ ಇದೀಗ ನಿಧಾನವಾಗಿ ಇದಕ್ಕೆಲ್ಲಾ ಒಗ್ಗಿಕೊಳ್ಳುತ್ತಿದ್ದಾರೆ.
“ಮಕ್ಕಳು ನನ್ನೊಳಗಿಂದ ಹೊರಬರುತ್ತಿದ್ದರೆ, ನನ್ನ ಮನದಲ್ಲಿ ಬಹಳ ಪ್ರಶ್ನೆಗಳು ಸುಳಿಯುತ್ತಿದ್ದವು. ಏನಾಗುತ್ತಿದೆ ಎಂದು ನನಗೆ ಅರಿವಿದ್ದರೂ ಸಹ ಲೆಕ್ಕವಿಲ್ಲದಷ್ಟು ಮಕ್ಕಳು ಹೊರಬರುತ್ತಿವೆ ಎನಿಸುತ್ತಿತು. ಹೆರಿಗೆ ಸಂದರ್ಭದಲ್ಲಿ ನನ್ನ ಸಹೋದರಿ ನನ್ನ ಕೈಗಳನ್ನು ಹಿಡಿದುಕೊಂಡಿದ್ದಳು, ಈ ವೇಳೆ, ಆ ಮಕ್ಕಳನ್ನೆಲ್ಲ ನೋಡಿಕೊಳ್ಳುವವರು ಯಾರೆಂದು ನನಗೆ ತೋಚುತ್ತಿರಲಿಲ್ಲ,” ಎಂದು ಸಿಸ್ಸೆ ತಿಳಿಸಿದ್ದಾರೆ.
ಸಿಸ್ಸೆಯ ಆಸ್ಪತ್ರೆ ವೆಚ್ಚ ಒಂದು ದಶಲಕ್ಷ ಪೌಂಡ್ (10.3 ಕೋಟಿ ರೂ.ಗಳು) ತಲುಪಿದ್ದು, ಈ ಖರ್ಚನ್ನು ಮಾಲಿಯನ್ ಸರ್ಕಾರ ನೋಡಿಕೊಳ್ಳುತ್ತದೆ.