ಚಾಮರಾಜನಗರ: ಮಲೆ ಮಹದೇಶ್ವರ ಸ್ವಾಮಿ ದರ್ಶನಕ್ಕೆ ಬಂದ ಭಕ್ತನಿಗೆ ಪ್ರಸಾದ ಜೊತೆಗೆ 2.91 ಲಕ್ಷ ರೂ. ನೀಡಿದ ಘಟನೆ ನಡೆದಿದೆ. ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಈ ರೀತಿ ಆಗಿದೆ.
ಭೀಮನ ಅಮಾವಾಸ್ಯೆಯಂದು ದರ್ಶನಕ್ಕೆ ಬಂದ ಭಕ್ತರೊಬ್ಬರು ಪ್ರಸಾದ ಕೌಂಟರ್ ನಲ್ಲಿ ಪ್ರಸಾದ ಪಡೆದುಕೊಂಡಿದ್ದಾರೆ. ಸಿಬ್ಬಂದಿ ಎಡವಟ್ಟಿನಿಂದ ಭಕ್ತನಿಗೆ ಪ್ರಸಾದ ಜೊತೆಗೆ ಪಕ್ಕದಲ್ಲಿ ಇದ್ದ ಹಣದ ಬ್ಯಾಗ್ ಕೂಡ ಕೊಟ್ಟಿದಾರೆ.
ನಂತರದಲ್ಲಿ ಹಣ ಕಾಣಿಸದಿದ್ದಾಗ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗಿದೆ. ಆಗ ಭಕ್ತರೊಬ್ಬರಿಗೆ ಲಾಡು ಪ್ರಸಾದದೊಂದಿಗೆ ಹಣ ಇದ್ದ ಚೀಲವನ್ನು ಕೂಡ ಕೊಟ್ಟಿರುವುದು ಗೊತ್ತಾಗಿದೆ. ಕಣ್ತಪ್ಪಿನಿಂದ ಘಟನೆ ನಡೆದಿದೆ ಎನ್ನಲಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿ ದೂರು ಕೊಡಲಾಗಿದೆ. ಲೋಪವೆಸಗಿದ ಸಿಬ್ಬಂದಿಯಿಂದ ಹಣ ವಸೂಲು ಮಾಡುವ ಬಗ್ಗೆ ಚರ್ಚೆ ನಡೆದಿದ್ದು, ದೇವಾಲಯದ ಆಡಳಿತ ಮಂಡಳಿಯವರು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.