ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಕಳೆದ 25 ದಿನ ಅವಧಿಯಲ್ಲಿ 3.13 ಕೋಟಿ ರೂ. ಸಂಗ್ರಹವಾಗಿದ್ದು ದಾಖಲೆಯಾಗಿದೆ.
ಮಂಗಳವಾರ ಬೆಳಿಗ್ಗೆ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಗಿದೆ. ಎಣಿಕೆ ಕಾರ್ಯ ರಾತ್ರಿ 10.30 ರವರೆಗೂ ನಡೆದಿದೆ. ಈ ಬಾರಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮತ್ತು ಸರ್ಕಾರಿ ರಜೆಯ ದಿನಗಳಂದು ಲಕ್ಷಾಂತರ ಭಕ್ತರು ಭೇಟಿ ನೀಡಿ ದರ್ಶನ ಪಡೆದುಕೊಂಡಿದ್ದಾರೆ.
ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ತೀರಿಸುತ್ತಾರೆ. ಹುಂಡಿಯಲ್ಲಿ ಹಣ, ಚಿನ್ನ, ಬೆಳ್ಳಿ ಸಮರ್ಪಿಸುತ್ತಾರೆ. 3.13 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದ್ದು, 47 ಗ್ರಾಂ ಚಿನ್ನ, 2309 ಗ್ರಾಂ ಬೆಳ್ಳಿ, ಚಲಾವಣೆ ಇಲ್ಲದ 2000 ರೂ. ಮುಖಬೆಲೆಯ 26 ನೋಟುಗಳು, ಎರಡು ಡಾಲರ್, ವಿವಿಧ ದೇಶಗಳ 7 ವಿದೇಶಿ ನೋಟುಗಳು ಸಂಗ್ರಹವಾಗಿದೆ.