ಮಹಿಳೆಯರ ಚೆಸ್ ಸ್ಫರ್ಧೆಯಲ್ಲಿ ಭಾಗವಹಿಸಲೆಂದು ಬುರ್ಖಾ ಧರಿಸಿ ಬಂದಿದ್ದ ಪುರುಷ ಆಟಗಾರನೊಬ್ಬ ಕೆನ್ಯಾದಲ್ಲಿ ಭಾರೀ ಸುದ್ದಿ ಮಾಡಿದ್ದಾನೆ. ಸ್ಟ್ಯಾನ್ಸಲಿ ಒಮೊಂಡಿ ಎಂಬ ಈತ ತನ್ನ ತಪ್ಪನ್ನು ಒಪ್ಟಿಕೊಂಡಿದ್ದಾನೆ.
ಬುರ್ಖಾ ಹಾಗೂ ಕನ್ನಡಕಗಳನ್ನು ಧರಿಸಿ ಬಂದ ಈತ ತನ್ನ ಗುರುತನ್ನು ಮುಚ್ಚಿಡಲು ಯತ್ನಿಸಿದ್ದಾನೆ. ಮಿಲಿಸೆಂಟ್ ಅವೌರ್ ಎಂದು ತನ್ನನ್ನು ತಾನು ನೋಂದಾಯಿಸಿಕೊಂಡಿದ್ದಾನೆ ಸ್ಟಾನ್ಲೇ. ಕೂಟದ ಆಯೋಜಕರಿಗೆ ಅನುಮಾನ ಬಂದು ಆತನ ಬುರ್ಖಾ ತೆರೆಸಿದ್ದಾರೆ.
ಕೂಟದ ಆರಂಭದ ಸುತ್ತುಗಳಲ್ಲಿ ಗೆಲ್ಲುತ್ತಲೇ ಸಾಗಿದ ಈತ, ನೋಂದಣಿ ಸಂದರ್ಭದಿಂದಲೂ ಮಾತಾಡುವುದನ್ನೇ ತಪ್ಪಿಸುತ್ತಿದ್ದ. ಬಹುಶಃ ಈತ ಸಂಪ್ರದಾಯಸ್ಥ ಮುಸ್ಲಿಂ ಮಹಿಳೆ ಇರಬಹುದು ಎಂದು ಎಲ್ಲರೂ ಭಾವಿಸಿದ್ದಾರೆ.
ನಾಲ್ಕನೇ ಸುತ್ತಿನ ಪಂದ್ಯಗಳ ವೇಳೆ ಅನುಮಾನಗೊಂಡ ಆಯೋಜಕರು ಆತನನ್ನು ಪ್ರತ್ಯೇಕ ಕೋಣೆಗೆ ಕರೆದೊಯ್ದು, ತಪಾಸಣೆ ಮಾಡಿದ್ದಾರೆ. ಈ ವೇಳೆ ಸಿಕ್ಕಿಬಿದ್ದ ಈತ, ತಾನೊಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ಆರ್ಥಿಕ ಸಂಕಷ್ಟದಲ್ಲಿರುವುದಾಗಿ ಹೇಳಿಕೊಂಡಿದ್ದಾನೆ.
1500ರಷ್ಟು ಅಂತಾರಾಷ್ಟ್ರೀಯ ಕ್ಲಾಸಿಕಲ್ ರೇಟಿಂಗ್ ಹಾಗೂ 1750ರಷ್ಟು ಬ್ಲಿಟ್ಜ್ ರೇಟಿಂಗ್ ಹೊಂದಿರುವ ಈ ಆಟಗಾರರನ್ನು ಕೂಡಲೇ ಟೂರ್ನಿಯಿಂದ ಹೊರ ಹಾಕಲಾಗಿದೆ.
ಇದೇ ವೇಳೆ ಕೂಟದಲ್ಲಿ ಈತ ಗಳಿಸಿದ ಅಂಕಗಳನ್ನು ಈತನ ಎದುರಾಳಿಗಳಿಗೆ ನೀಡಲಾಗಿದೆ.
ಏಪ್ರಿಲ್ 6 – ಏಪ್ರಿಲ್ 10ರ ನಡುವೆ ಕೆನ್ಯಾ ರಾಜಧಾನಿ ನೈರೋಬಿಯಲ್ಲಿ ಆಯೋಜಿಸಲಾದ ಈ ವಾರ್ಷಿಕ ಕೂಟದಲ್ಲಿ 22 ದೇಶಗಳಿಂದ 400ಕ್ಕೂ ಹೆಚ್ಚಿನ ಅಭ್ಯರ್ಥಿಗಳು ಭಾಗಿಯಾಗಿದ್ದಾರೆ.