ಇಡೀ ದಿನ ನಿಂತಿರುತ್ತೇವೆ. ಇಲ್ಲ ಅತ್ತಿಂದಿತ್ತ ಓಡಾಡುತ್ತಿರುತ್ತೇವೆ. ಇದ್ರಿಂದಾಗಿ ನಮ್ಮ ಕಾಲು ತುಂಬಾ ದಣಿದಿರುತ್ತದೆ. ಪಾದ, ಕಾಲು ನೋವು ಕಾಡುತ್ತಿದ್ದರೆ ಮಸಾಜ್ ಮಾಡಿಕೊಳ್ಳುತ್ತೇವೆ. ಈ ಮಸಾಜ್ ನಿಮ್ಮ ಕಾಲಿಗೆ ಹಿತವೆನ್ನಿಸುವ ಜೊತೆಗೆ ಕಾಲಿನ ಸೌಂದರ್ಯವನ್ನೂ ಹೆಚ್ಚಿಸುತ್ತದೆ.
ತಜ್ಞರ ಪ್ರಕಾರ ಕಾಲಿನ ಮಸಾಜ್ ಉತ್ತಮ ಆರೋಗ್ಯಕ್ಕೆ ಒಳ್ಳೆಯದಂತೆ. ಈ ಬಗ್ಗೆ ನಡೆದ ಅನೇಕ ಅಧ್ಯಯನದಲ್ಲಿ ಎಲ್ಲ ವಯಸ್ಸಿನವರಿಗೂ ಕಾಲಿನ ಮಸಾಜ್ ಒಳ್ಳೆಯದು ಎನ್ನಲಾಗಿದೆ. ಮಲಗುವ ಮೊದಲು ಕಾಲು ಮಸಾಜ್ ಮಾಡುವುದರಿಂದ ಸಾಕಷ್ಟು ಲಾಭವಿದೆ.
ಪಾದದ ಮಸಾಜ್ ನಿಂದ ರಕ್ತ ಪರಿಚಲನೆ ಸುಲಭವಾಗುತ್ತದೆ. ಉತ್ತಮ ನಿದ್ರೆ ಬರುತ್ತದೆ. ಒತ್ತಡ ಹಾಗೂ ಕೆಲಸದ ಆಯಾಸವನ್ನು ಕಡಿಮೆ ಮಾಡುತ್ತದೆ. ಬೆನ್ನುನೋವು ಹಾಗೂ ಕಾಲು ನೋವಿನಿಂದ ನೆಮ್ಮದಿ ಸಿಗುತ್ತದೆ. ಕಾಲುಗಳ ಸೌಂದರ್ಯ ಹೆಚ್ಚಾಗಿ ಕಾಲು ತೇವಾಂಶದಿಂದ ಕೂಡಿರುತ್ತದೆ.
ಪ್ರತಿದಿನ ಪಾರ್ಲರ್ ಗೆ ಹೋಗಿ ಮಸಾಜ್ ಮಾಡಿಸಿಕೊಳ್ಳೋದು ಸುಲಭದ ಕೆಲಸವಲ್ಲ. ಪ್ರತಿದಿನ ಪಾರ್ಲರ್ ಗೆ ಹೋಗುವುದರಿಂದ ಜೇಬು ಖಾಲಿಯಾಗುತ್ತದೆ. ಹಣವಿದ್ದರೂ ಕೆಲವರಿಗೆ ಸಮಯ ಸಿಗೋದಿಲ್ಲ. ಹಾಗಿರುವಾಗ ಮನೆಯಲ್ಲಿಯೇ ನೀವು ಸುಲಭವಾಗಿ ಕಾಲುಗಳ ಮಸಾಜ್ ಮಾಡಿಕೊಳ್ಳಬಹುದು.
ದೊಡ್ಡ ಪಾತ್ರೆಯಲ್ಲಿ ಬಿಸಿ ನೀರನ್ನು ಹಾಕಿ. ಅದಕ್ಕೆ ಯಾವುದಾದ್ರೂ ಎಸೆನ್ಶಿಯಲ್ ಆಯಿಲ್ ಹಾಕಿ. 10-20 ನಿಮಿಷದವರೆಗೆ ನೀರಿನಲ್ಲಿ ಪಾದಗಳನ್ನು ಮುಳುಗಿಸಿಟ್ಟುಕೊಳ್ಳಿ. ನಂತ್ರ ಕಾಲನ್ನು ಸ್ವಚ್ಛಗೊಳಿಸಿ. ಬಿಸಿ ಎಣ್ಣೆ ಅದ್ರಲ್ಲೂ ತೆಂಗಿನ ಎಣ್ಣೆಯಾದ್ರೆ ಬೆಸ್ಟ್. ಅದನ್ನು ನಿಮ್ಮ ಕಾಲಿಗೆ ಹಚ್ಚಿ ಒಂದೊಂದೇ ಕಾಲು, ಪಾದಕ್ಕೆ ಮಸಾಜ್ ಮಾಡಿಕೊಳ್ಳಿ. ಪ್ರತಿದಿನ ಹೀಗೆ ಮಾಡಿ ಫಲಿತಾಂಶ ನೀವೇ ನೋಡಿ.