ಮಾಹೆ: ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬೆನ್ನಲ್ಲೇ ಮಾಲ್ಡಿವ್ಸ್ ನ ಮೂವರು ಸಚಿವರನ್ನು ಅಮಾನತು ಮಾಡಲಾಗಿದೆ.
ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ 3 ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತು ಮಾಡಿದೆ. ಮಾಲ್ಡೀವ್ಸ್ ಸರ್ಕಾರದ ಮೂವರು ಮಂತ್ರಿಗಳಾದ ಮರಿಯಮ್ ಶಿಯುನಾ, ಮಲ್ಶಾ ಮತ್ತು ಹಸನ್ ಜಿಹಾನ್ ಅವರನ್ನು ‘ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳಿಗಾಗಿ ಅಮಾನತುಗೊಳಿಸಿದೆ’ ಎಂದು ಸ್ಥಳೀಯ ಮಾಧ್ಯಮ ಅಟಾಲ್ ಟೈಮ್ಸ್ ವರದಿ ಮಾಡಿದೆ.
ಮಾಲ್ಡೀವ್ಸ್ ಸರ್ಕಾರದ ವಕ್ತಾರ ಇಬ್ರಾಹಿಂ ಖಲೀಲ್, “ಕಾಮೆಂಟ್‌ಗಳಿಗೆ ಕಾರಣವಾದ ಎಲ್ಲಾ ಸರ್ಕಾರಿ ಅಧಿಕಾರಿಗಳನ್ನು ತಕ್ಷಣವೇ ಅವರ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ” ಎಂದು ಉಲ್ಲೇಖಿಸಿದೆ.
ಮಾಲ್ಡೀವ್ಸ್ ಕ್ಯಾಬಿನೆಟ್‌ನ ಅಮಾನತುಗೊಂಡ ಉಪ ಮಂತ್ರಿಗಳಲ್ಲಿ ಒಬ್ಬರಾದ ಹಸನ್ ಜಿಹಾನ್ ಅವರು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್ ನಲ್ಲಿ ಸ್ಥಳೀಯ ಮಾಧ್ಯಮ ಟ್ವೀಟ್ ಅನ್ನು ಉಲ್ಲೇಖಿಸಿ “ನಕಲಿ” ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ಮಾಲ್ಡೀವ್ಸ್ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದೀಪ ಭೇಟಿಯ ಕುರಿತು ಸಚಿವೆ ಮರಿಯಮ್ ಶಿಯುನಾ ಅವರ ಹೇಳಿಕೆಗಳ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವ ಹೇಳಿಕೆ ನೀಡಿತು. ಭಾರತದಿಂದ ಬರುವ ಪ್ರವಾಸಿಗರ ರದ್ದತಿಯಲ್ಲಿ ಹಠಾತ್ ಏರಿಕೆ ಕಂಡ ಮಾಲ್ಡೀವ್ಸ್ ಸರ್ಕಾರ, ಅಂತಹ “ಅವಹೇಳನಕಾರಿ ಟೀಕೆಗಳನ್ನು” ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಹೇಳಿತ್ತು.
ಲಕ್ಷದ್ವೀಪ್ ಕಡಲತೀರದಲ್ಲಿನ ಪ್ರಧಾನಿ ಮೋದಿಯವರ ವಿಡಿಯೊ ಪೋಸ್ಟ್ ಮಾಡಿದ ನಂತರ ಅವರ ವಿರುದ್ಧ ಮಾಲ್ಡೀವ್ಸ್ ಸಚಿವರು ಅವಹೇಳನಕಾರಿ ಹೇಳಿಕೆಗಳನ್ನು ಬಳಸಿದಾಗ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಈ ಅಭಿಪ್ರಾಯಗಳು ವೈಯಕ್ತಿಕ ಮತ್ತು ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಮಾಲ್ಡೀವ್ಸ್ ಸರ್ಕಾರ ಹೇಳಿತ್ತು.
ಮಾಲ್ಡೀವ್ಸ್ ಸಚಿವರೊಬ್ಬರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ ನಂತರ ಪ್ರತೀಕಾರವಾಗಿ 8,000 ಕ್ಕೂ ಹೆಚ್ಚು ಹೋಟೆಲ್ ಬುಕಿಂಗ್ ಮತ್ತು 2,500 ಫ್ಲೈಟ್ ಟಿಕೆಟ್‌ಗಳನ್ನು ರದ್ದುಗೊಳಿಸಲಾಗಿದೆ.