ಸದ್ಯದಲ್ಲಿ ಸ್ಮಾರ್ಟ್‌ಫೋನ್‌ಗಳು ಹೆಚ್ಚಾಗಿ ಬಳಕೆ ಆಗುತ್ತಿರುವುದು ಸೆಲ್ಫೀ ಕ್ಲಿಕ್ಕಿಸಲು ಮತ್ತು ಚಾಟ್ ಮಾಡಲು ಮಾತ್ರವೇ. ಯುವಕ, ಯುವತಿಯರಿಂದ ಹಿಡಿದು ಮಧ್ಯ ವಯಸ್ಕರವರೆಗೆ ಎಲ್ಲರೂ ತಮ್ಮ ಸೆಲ್ಫಿ ಫೋಟೊ ಕ್ಲಿಕ್ಕಿಸಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದರಿಂದ ಅವರ ಮನಸ್ಸಿಗೆ ಏನೋ ಒಂದು ತರಹ ಖುಷಿ. ತಾನು ಚೆನ್ನಾಗಿ ಕಾಣುತ್ತಿದ್ದೇನೆ, ಆಕರ್ಷಣೆ ಇದೆ ಎಂಬ ಸಮಾಧಾನ ಕೂಡ.
ಆದರೆ ಮಲೇಷ್ಯಾದ ಯುವಕ ’’ಘೋಂಜಾಲಿ’’, ತನ್ನ 17ನೇ ವಯಸ್ಸಿನಿಂದ ನಿತ್ಯ ನೂರಾರು ಸೆಲ್ಫಿಗಳನ್ನು ಕ್ಲಿಕ್ಕಿಸಿದ್ದಾನೆ. ಅವುಗಳ ಸಂಗ್ರಹವು ಲಕ್ಷಾಂತರವಾಗಿದೆ. ಹೀಗೆ ಸೆಲ್ಫಿಗಳನ್ನು ಸಂಗ್ರಹಿಸುವ ಬದಲು ಫೋಟೊಗಳನ್ನು ನಾನ್ ಫಂಜಿಬಲ್ ಟೋಕನ್ (ಡಿಜಿಟಲ್ ಟೋಕನ್- ಎನ್‌ಎಫ್‌ಟಿ) ಆಗಿ ಪರಿವರ್ತಿಸುವ ಐಡಿಯಾ ಆತನಿಗೆ ಹೊಳೆದಿದೆ.
ಈ ಡಿಜಿಟಲ್ ಟೋಕನ್‌ಗಳನ್ನು ಪ್ರೊಫೈಲ್ ಫೋಟೊಗಳಾಗಿ ಬಳಸುತ್ತಿರುವವರ ಸಂಖ್ಯೆ ಹೆಚ್ಚಿದೆ. ಇದೊಂದು ಮಾದರಿಯಲ್ಲಿ ಡಿಜಿಟಲ್ ಸ್ವತ್ತು ಕೂಡ ಎಂಬ ಭಾವನೆ ಇದೆ. ಸಾವಿರಾರು ಜನರು ಇದೇ ಕೆಲಸದಲ್ಲಿ ತೊಡಗಿದ್ದಾರೆ ಕೂಡ. ಇಂಥ ಟೋಕನ್‌ಗಳು ಬಿಟ್‌ಕಾಯಿನ್‌ಗಳಂತೆ ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿದೆ. ಆಸಕ್ತರು ನಿಮ್ಮನ್ನು ಸಂಪರ್ಕಿಸಿ ಎನ್‌ಎಫ್‌ಟಿಗೆ ಮೌಲ್ಯ ನಿಗದಿಪಡಿಸುತ್ತಾರೆ. ನಿಮಗೆ ಒಪ್ಪಿಗೆ ಇದ್ದಲ್ಲಿ ನಿಮ್ಮ ಫೋಟೊವು ಎನ್‌ಎಫ್‌ಟಿ ಆಗಿ ಮಾರಾಟವಾಗಲಿದೆ. ಇದು ಖಾಸಗಿತನವನ್ನು ಮಾರಾಟ ಮಾಡಿದಂತೆಯೇ ಸರಿ ಎಂಬ ಆಕ್ಷೇಪ ಕೂಡ ಹಲವರಿಂದ ಕೇಳಿಬಂದಿದೆ.
ಆದರೆ, ಘೋಂಜಾಲಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಜ.9 ರಿಂದ ತನ್ನ ಎನ್‌ಎಫ್‌ಟಿ ಮಾರಾಟ ಆರಂಭಿಸಿ ಕೇವಲ 5 ದಿನಗಳಲ್ಲಿಯೇ ಆತ ಲಕ್ಷಾಧಿಪತಿ ಆಗಿದ್ದಾನೆ. ಒಟ್ಟು 331 ಎನ್‌ಎಫ್‌ಟಿ ಮಾರಾಟವಾಗಿದೆ. ನನ್ನ ಕೆಲವು ವಿಚಿತ್ರ ಫೋಟೊಗಳನ್ನು ಕಂಡು ನಿಂದಿಸಬೇಡಿರಿ, ಪೋಷಕರಿಗೆ ಬೇಜಾರಾಗುತ್ತದೆ ಎಂದು ಘೋಂಜಾಲಿ ಮನವಿ ಮಾಡಿದ್ದಾನೆ ಕೂಡ.