ಕೌಲಾಲಂಪುರ(ಮಲೇಷ್ಯಾ): ಕಡ್ಡಾಯ ಮರಣದಂಡನೆಯನ್ನು ರದ್ದುಗೊಳಿಸಲು ಮಲೇಷ್ಯಾ ಒಪ್ಪಿಕೊಂಡಿದೆ. ವಿವಿಧ ಅಪರಾಧಗಳಿಗೆ ಪರ್ಯಾಯ ಶಿಕ್ಷೆಗಳನ್ನು ನಿಗದಿಪಡಿಸಲು ನ್ಯಾಯಾಧೀಶರಿಗೆ ಅವಕಾಶ ನೀಡಿದೆ ಎಂದು ಮಲೇಷ್ಯಾದ ಕಾನೂನು ಸಚಿವರು ಶುಕ್ರವಾರ ಹೇಳಿದ್ದಾರೆ.
ಪ್ರಸ್ತುತ ಕಡ್ಡಾಯ ಮರಣದಂಡನೆಯನ್ನು ಪ್ರಚೋದಿಸುವ 11 ಅಪರಾಧಗಳಿಗೆ ಮತ್ತು 20 ಕ್ಕೂ ಹೆಚ್ಚು ಅಪರಾಧಗಳಿಗೆ ಸಂಭಾವ್ಯ ಮರಣದಂಡನೆ ಶಿಕ್ಷೆ ಬಗ್ಗೆ ಸರ್ಕಾರ ಅಧ್ಯಯನ ಮಾಡುತ್ತದೆ ಎಂದು ವಾನ್ ಜುನಾದಿ ತುವಾಂಕು ಜಾಫರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾನೂನಿಗೆ ತಿದ್ದುಪಡಿಗಳು ಜಾರಿಗೆ ಬರುವ ಮೊದಲು ಸಂಸತ್ತಿನಲ್ಲಿ ಇನ್ನೂ ಮಂಡಿಸಿ ಅಂಗೀಕರಿಸಬೇಕಾಗಿದೆ. ಮಲೇಷ್ಯಾದಲ್ಲಿ 1,300 ಕ್ಕೂ ಹೆಚ್ಚು ಜನರು ಮರಣದಂಡನೆಗೆ ಗುರಿಯಾಗಿದ್ದಾರೆ, ಹೆಚ್ಚಿನ ಪ್ರಕರಣಗಳು ಮಾದಕವಸ್ತು ಕಳ್ಳಸಾಗಣೆಯನ್ನು ಒಳಗೊಂಡಿವೆ. ಮಲೇಷ್ಯಾದಲ್ಲಿ ಮರಣದಂಡನೆಯು ಕೊಲೆ, ಮಾದಕವಸ್ತು ಕಳ್ಳಸಾಗಣೆ, ದೇಶದ್ರೋಹ, ಅಪಹರಣ ಮತ್ತು ಭಯೋತ್ಪಾದಕ ಕೃತ್ಯಗಳು ಸೇರಿದಂತೆ ಹಲವಾರು ಅಪರಾಧಗಳಿಗೆ ಶಿಕ್ಷೆಯಾಗಿ ಗಲ್ಲಿಗೇರಿಸುವುದನ್ನು ಕಡ್ಡಾಯಗೊಳಿಸುತ್ತದೆ.
ಆ್ಯಂಟಿ ಡೆತ್ ಪೆನಾಲ್ಟಿ ಏಷ್ಯಾ ನೆಟ್ ವರ್ಕ್ ಪ್ರಕಾರ, ದೇಶದಲ್ಲಿ ಮರಣದಂಡನೆಗೆ ಗುರಿಯಾಗಿರುವ 1,355 ಜನರಲ್ಲಿ 526 ಮಂದಿ ವಿದೇಶಿಯರಾಗಿದ್ದಾರೆ. 2018 ರಲ್ಲಿ ಮಲೇಷ್ಯಾ ಎಲ್ಲಾ ಅಪರಾಧಗಳಿಗೆ ಮರಣದಂಡನೆ ರದ್ದುಗೊಳಿಸುವುದಾಗಿ ಮತ್ತು ಎಲ್ಲಾ ಬಾಕಿ ಉಳಿದಿರುವ ಮರಣದಂಡನೆಗಳನ್ನು ನಿಲ್ಲಿಸುವುದಾಗಿ ಹೇಳಿದ್ದರೂ, 2019 ರಲ್ಲಿ ಹಿಂದೆ ಸರಿದಿತ್ತು. ಆಯ್ದ ಅಪರಾಧಗಳಿಗೆ ಮರಣದಂಡನೆ ಇನ್ನು ಮುಂದೆ ಕಡ್ಡಾಯವಲ್ಲ ಎಂದು ಹೇಳಿದೆ.