
ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಮಲಯಾಳಂ ನಟಿ ದಿವ್ಯಪ್ರಭಾ ಪಾನಮತ್ತ ಸಹ ಪ್ರಯಾಣಿಕರೊಬ್ಬರಿಂದ ಕಿರುಕುಳ ಅನುಭವಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿರುವ ನಟಿ ಮುಂಬೈನಿಂದ ಕೊಚ್ಚಿಗೆ ವಿಮಾನದಲ್ಲಿ ಪ್ರಯಾಣಿಸುವಾಗ ಸಹ ಪ್ರಯಾಣಿಕ ಕಿರುಕುಳ ನೀಡಿದ್ದಾಗಿ ಹೇಳಿದ್ದಾರೆ. ಅಕ್ಟೋಬರ್ 9, ಸೋಮವಾರ ಈ ಘಟನೆ ನಡೆದಿದ್ದು ನಟಿ ಇದೀಗ ಅಧಿಕೃತ ಪೊಲೀಸ್ ದೂರು ನೀಡಿದ್ದಾರೆ. ನಟಿ ದಿವ್ಯಪ್ರಭಾ ಪೋಸ್ಟ್ ನೋಡಿ ಆಕೆಯ ಅಭಿಮಾನಿಗಳು ಆಕ್ರೋಶ ಮತ್ತು ಆತಂಕ ಹೊರಹಾಕಿದ್ದಾರೆ. ಘಟನೆಯ ಬಗ್ಗೆ ತಾನು ಗಗನಸಖಿಯರಿಗೆ ಮಾಹಿತಿ ನೀಡಿದರೂ ಅವರು ನನ್ನ ಸೀಟ್ ಬದಲಾಯಿಸುವ ಕ್ರಮವನ್ನಷ್ಟೇ ತೆಗೆದುಕೊಂಡರು ಎಂದು ತಮ್ಮ ಪೋಸ್ಟ್ ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
“ಮುಂಬೈನಿಂದ ಕೊಚ್ಚಿಗೆ ಏರ್ ಇಂಡಿಯಾ ಫ್ಲೈಟ್ AI 681 ನಲ್ಲಿ ನಾನು ಎದುರಿಸಿದ ಗೊಂದಲದ ಘಟನೆಯ ಬಗ್ಗೆ ಗಮನ ಹರಿಸಲು ನಿಮ್ಮ ಬೆಂಬಲ ಬೇಕು. ಮದ್ಯದ ಅಮಲಿನಲ್ಲಿ ಸಹ ಪ್ರಯಾಣಿಕರೊಬ್ಬರು ನನಗೆ ವಿಮಾನದಲ್ಲಿ ಕಿರುಕುಳ ನೀಡಿದರು. ಈ ಬಗ್ಗೆ ಏರ್ ಹೋಸ್ಟೆಸ್ಗೆ ವರದಿ ಮಾಡಿದರೂ ಅವರು ತೆಗೆದುಕೊಂಡ ಏಕೈಕ ಕ್ರಮವೆಂದರೆ ಟೇಕಾಫ್ಗೆ ಸ್ವಲ್ಪ ಮೊದಲು ನನ್ನನ್ನು ಮತ್ತೊಂದು ಆಸನಕ್ಕೆ ಸ್ಥಳಾಂತರಗೊಳಿಸಿದರು.
ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಸಮಸ್ಯೆಯನ್ನು ವಿಮಾನ ನಿಲ್ದಾಣ ಮತ್ತು ಏರ್ಲೈನ್ ಅಧಿಕಾರಿಗಳಿಗೆ ವರದಿ ಮಾಡಲಾಗಿದ್ದು ಅವರು ನನ್ನನ್ನು ವಿಮಾನ ನಿಲ್ದಾಣದ ಪೊಲೀಸ್ ಸಹಾಯ ಕೋರುವಂತೆ ಮರುನಿರ್ದೇಶಿಸಿದರು. ಕೇರಳ ಪೊಲೀಸರಿಗೆ ನನ್ನ ಔಪಚಾರಿಕ ದೂರು ನೀಡಿದ್ದೇನೆ. ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸುತ್ತೇನೆ ”ಎಂದು ಅವರು ಕೇರಳ ಪೊಲೀಸರಿಗೆ ಕಳುಹಿಸಿದ ದೂರಿನ ಇ-ಮೇಲ್ನ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ.
ಮಲಯಾಳಂ ನಟಿ ಅನ್ನಾ ಬೆನ್ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ, ನಿಮಗೆ ಇಂತಹ ಅನುಭವವಾಗಿದ್ದಕ್ಕೆ ವಿಷಾದವಿದೆ. ಆ ವ್ಯಕ್ತಿ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳುತ್ತಾರೆಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
