ಪ್ರೀತಿಯಿಂದ ಸಾಕಿದ್ದ ಹಸು ಒಂದು ಅಪಘಾತದಲ್ಲಿ ಮೃತಪಟ್ಟ ವೇಳೆ ಇದರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ಹಸುವಿನ ಮಾಲೀಕನ ಮಕ್ಕಳು ಬಿಕ್ಕಿಬಿಕ್ಕಿ ಅತ್ತಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಮಲವಗೊಪ್ಪ ಬಡಾವಣೆಯ ವ್ಯಕ್ತಿಯೊಬ್ಬರ ಹಸು ಬೆಂಗಳೂರು – ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದಾಗ ಭದ್ರಾವತಿ ಕಡೆ ಹೊರಟಿದ್ದ ಲಾರಿ ಡಿಕ್ಕಿ ಹೊಡೆದಿತ್ತು.
ಇದರ ಪರಿಣಾಮ ಹಸು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಓಡೋಡಿ ಬಂದ ಮಕ್ಕಳು ಮೃತ ದೇಹ ಕಂಡು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಈ ಹಸುವಿಗೆ ಪೂಜಾ ಎಂದು ನಾಮಕರಣ ಮಾಡಿದ್ದ ಮಕ್ಕಳು ತುಂಬಾ ಹಚ್ಚಿಕೊಂಡಿದ್ದರು ಎನ್ನಲಾಗಿದೆ. ಹಸುವಿನ ಮುಂದೆ ಮಕ್ಕಳು ಕಣ್ಣೀರಿಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.