ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ವರುಣಾರ್ಭಟ ಜೋರಾಗಿದ್ದು, ಮಲಪ್ರಭಾ, ಘಟಪ್ರಭಾ ನದಿಗಳು, ಹಳ್ಳಗಳು ತುಂಬಿ ಹರಿಯುತ್ತಿವೆ.
ಖಾನಾಪುರ ತಾಲುಕಿನಲ್ಲಿ ಮಲಪ್ರಭಾ ನದಿ ಅಬ್ಬರಕ್ಕೆ ಅಲಾತ್ರಿ ಸೇರಿದಂತೆ ಹಲವು ಹಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ. ರಾಜ್ಯ ಹೆದ್ದಾರಿ ನದಿಯಂತಾಗಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ಈ ಭಾಗದ ರಸ್ತೆ ಮಾರ್ಗವನ್ನು ಬಂದ್ ಮಾಡಿದ್ದು, ಇದರಿಂದಾಗಿ 40ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಇನ್ನು ಮಲಪ್ರಭಾ ನದಿಯಿಂದಾಗಿ ಜಾಂಬೋಟಿ ಬಳಿಯ ಪ್ರಸಿದ್ಧ ಹಬ್ಬನಹಟ್ಟಿ ಆಂಜನೇಯ ದೇವಸ್ಥಾನ ಮುಳುಗಡೆಯಾಗಿದೆ.