ಅಫ್ಘಾನಿಸ್ತಾನದ ಅಧಿಕಾರ ತಾಲಿಬಾನ್ ತೆಕ್ಕೆಗೆ ಮತ್ತೊಮ್ಮೆ ಬೀಳುವುದು ನಿಚ್ಚಳವಾಗುತ್ತಲೇ ಅಲ್ಲಿನ ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಬಗ್ಗೆ ನೊಬೆಲ್ ಪುರಸ್ಕೃತೆ ಮಲಾಲಾ ಯುಸುಫ್‌ಜ಼ಾಯ್ ಚಿಂತಿತರಾಗಿದ್ದಾರೆ.
ಪಾಕಿಸ್ತಾನದ ಗಡಿ ಪ್ರದೇಶದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಅಭಿಯಾನ ನಡೆಸುತ್ತಿದ್ದ ವೇಳೆ ತಾಲಿಬಾನಿ ಭಯೋತ್ಪಾದಕರಿಂದ ಗುಂಡೇಟು ತಿಂದಿದ್ದ ಮಲಾಲಾ, ಅಪ್ಘಾನಿಸ್ತಾನದ ನಾಗರಿಕರನ್ನು ರಕ್ಷಿಸಲು ಕೂಡಲೇ ಕದನ ವಿರಾಮ ತರಲು ಜಾಗತಿಕ ಹಾಗೂ ಪ್ರಾದೇಶಿಕ ಶಕ್ತಿಗಳನ್ನು ಕೋರಿದ್ದಾರೆ.
“ಅಫ್ಘಾನಿಸ್ತಾನವನ್ನು ತಾಲಿಬಾನ್ ತೆಕ್ಕೆಗೆ ತೆಗೆದುಕೊಳ್ಳುವುದನ್ನು ನಾವೆಲ್ಲಾ ಸಂಪೂರ್ಣ ಶಾಕ್‌ನಿಂದ ನೋಡುತ್ತಿದ್ದೇವೆ. ಅಲ್ಲಿನ ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರ ಬಗ್ಗೆ ನನಗೆ ಆತಂಕವಾಗುತ್ತಿದೆ. ಕದನ ವಿರಾಮ ತರಲು ಜಾಗತಿಕ, ಪ್ರಾದೇಶಿಕ ಹಾಗೂ ಸ್ಥಳೀಯ ಶಕ್ತಿಗಳು ಕೂಡಲೇ ಮುಂದಾಗಬೇಕು,” ಎಂದು ಮಲಾಲಾ ಟ್ವೀಟ್ ಮಾಡಿದ್ದಾರೆ.
ರಾಜಧಾನಿ ಕಾಬೂಲ್‌ಗೆ ತಾಲಿಬಾನ್ ಅದಾಗಲೇ ಪ್ರವೇಶಿಸಿದ್ದು, ಅಧ್ಯಕ್ಷ ಅಶ್ರಫ್ ಘನಿ ತಜಕಿಸ್ತಾನದಲ್ಲಿದ್ದಾರೆ. ಅಫ್ಘಾನಿಸ್ತಾನದ ಚುಕ್ಕಾಣಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ತಾಲಿಬಾನ್ ತುದಿಗಾಲಲ್ಲಿ ನಿಂತಿದೆ. ಅಧಿಕಾರದ ಶಾಂತಿಯುತ ವರ್ಗಾವಣೆಗೆ ಕಾಯುತ್ತಿರುವುದಾಗಿ ಹೇಳಿಕೊಂಡಿರುವ ತಾಲಿಬಾನ್, ಕಾಬೂಲ್‌ನ ಆಯಕಟ್ಟಿನ ಪ್ರದೇಶಗಳಲ್ಲೆಲ್ಲಾ ತನ್ನ ಪಡೆಗಳು ನಿಂತಿರುವುದಾಗಿ ಹೇಳಿದೆ.