ಋತುಮಾನಕ್ಕೆ ತಕ್ಕಂತೆ ಉಡುಪು ಧರಿಸುವುದು ಹಿಂದಿನಿಂದಲೂ ಪಾಲಿಸಿಕೊಂಡ ಪದ್ಧತಿ. ಬೇಸಿಗೆ ಕಾಲದಲ್ಲಿ ಹೇಗೆ ದಪ್ಪಗಿನ ಬಟ್ಟೆಯನ್ನು ಮೈ ತುಂಬಾ ಹೊದ್ದು ಉಸಿರುಗಟ್ಟಿಸಿಕೊಳ್ಳುವುದಕ್ಕೆ ಆಗುವುದಿಲ್ಲವೋ ಹಾಗೇ ಚಳಿಗಾಲದಲ್ಲಿ ತೆಳ್ಳಗಿನ ಬಟ್ಟೆ ಹಾಕಿಕೊಳ್ಳುವುದಕ್ಕೆ ಆಗುವುದಿಲ್ಲ. ಚುಮು ಚಮು ಚಳಿಗೆ ಬೆಚ್ಚಗಿನ ಉಡುಪೇ ಹೇಳಿ ಮಾಡಿಸಿದ್ದು. ಹಾಗಂಥ ಮೈ ತುಂಬಾ ದಪ್ಪಗಿನ ಬಟ್ಟೆ ಧರಿಸಿಕೊಂಡು ಹೋದರೆ ಚೆನ್ನಾಗಿರುತ್ತದಾ…? ಬಟ್ಟೆಯ ವಿನ್ಯಾಸದಿಂದ ಹಿಡಿದು ಬಣ್ಣಗಳು ಮನಕೊಪ್ಪುವಂತೆ ಹಾಗೂ ನೋಡುಗರ ಕಣ್ಮನ ಸೆಳೆಯಬೇಕು. ಇದರ ಜತೆಗೆ ಈಗಿನ ಟ್ರೆಂಡ್ ನದ್ದು ಆಗಿರಬೇಕು ಎಂಬುದು ಎಲ್ಲರ ಆಸೆ ಆಗಿರುತ್ತದೆ. ಟ್ರೆಂಡ್ ನ ಜತೆಗೆ ಮೈಯನ್ನು ಬೆಚ್ಚಗೆ ಇಡುವ ಉಡುಪು ಸಿಕ್ಕರೆ ಫ್ಯಾಷನ್ ಪ್ರಿಯರ ಮೊಗದಲ್ಲಿ ಮಂದಹಾಸ ಉಕ್ಕುವುದು ಗ್ಯಾರಂಟಿ. ಚಳಿಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಲು ಈ ಉಡುಪು ಟ್ರೈ ಮಾಡಿ.
ಮಾರ್ಕೆಟ್ ನಲ್ಲಿ ಇಂದು ತರಹೇವಾರಿ ಸ್ಟೈಲಿಶ್ ಸ್ವೆಟರ್ ಗಳು ಇವೆ. ಲೇಸ್ ವರ್ಕ್ ನಿಂದ ಹಿಡಿದು ಕ್ರಾಸ್ ಬಟನ್, ಕುತ್ತಿಗೆಯ ಬಳಿ ಚೈನ್ ರೀತಿ ವಿನ್ಯಾಸ ವಿರುವ ಸ್ವೆಟರ್ ಗಳು ಇವೆ. ಇವು ನಿಮ್ಮನ್ನು ಬೆಚ್ಚಗಿರಿಸುವುದರ ಜತೆಗೆ ಸ್ಟೈಲಿಶ್ ಲುಕ್ ಕೂಡ ನೀಡುತ್ತದೆ. ಹೆಚ್ಚು ಗಾಢ ಬಣ್ಣದ ಸ್ವೆಟರ್ ಗಿಂತ ಲೈಟ್ ಕಲರ್ ಸ್ವೆಟರ್ ಹೆಚ್ಚು ಚೆನ್ನಾಗಿರುತ್ತದೆ. ತುಂಬಾ ದಪ್ಪಗಿರುವ ಸ್ವೆಟರ್ ಹಾಕಿದರೆ ಮೈಮಾಟ ಕಾಣಿಸಲ್ಲ ಎನ್ನುವವರು ಬಟನ್ ಸ್ವೆಟರ್ ಕೂಡ ಪ್ರಯತ್ನಿಸಬಹುದು. ಸ್ವೆಟರ್ ಬಳಸುವುದಾದರೆ ತೆಳುವಾದ ಕಾಟನ್ ಉಡುಪು ಧರಿಸಿ ಇದರಿಂದ ಹೆಚ್ಚು ದಪ್ಪಗೆ ಕಾಣಿಸಲ್ಲ.
ಇನ್ನು ಸೂಟ್ ಇಷ್ಟಪಡುವವರು ಪಾಪ್ ಕಲರ್ ಸೂಟ್ಸ್ ಅನ್ನು ಆಯ್ಕೆ ಮಾಡಬಹುದು. ನಿಮ್ಮ ತ್ವಚೆಯ ಬಣ್ಣಕ್ಕೆ ಹೊಂದಿಕೊಳ್ಳುವಂಥ ಸ್ಟೈಲಿಶ್ ಸೂಟ್ ಆಯ್ಕೆ ಮಾಡಿಕೊಳ್ಳಿ. ನಿಮ್ಮಿಷ್ಟದ ಸ್ಟೈಲಿಷ್ ಆಭರಣಗಳೊಂದಿಗೆ, ಹೀಲ್ಸ್ ಅಥವಾ ಶೂ ಕೂಡ ಈ ದಿರಿಸಿಗೆ ಮ್ಯಾಚ್ ಆಗುತ್ತದೆ. ಇಡೀ ಮೈ ಅಪ್ಪುವ ಈ ಸೂಟ್ ಚಳಿಯಿಂದಲೂ ನಿಮ್ಮನ್ನು ರಕ್ಷಿಸುತ್ತದೆ. ಜತೆಗೆ ಸ್ಟೈಲಿಷ್ ನೋಟ ನೀಡುತ್ತದೆ.
ಮ್ಯಾಕ್ಸಿ ಕೋಟ್ಸ್ ಕೂಡ ಈ ಚಳಿಗಾಲಕ್ಕೆ ಹೆಚ್ಚು ಸೂಕ್ತವಾದ ಉಡುಪು ಆಗಿದೆ. ಉಡುಪಿನ ಮೇಲೆ ಇದನ್ನು ಧರಿಸುವುದರಿಂದ ಚಳಿಯಿಂದ ರಕ್ಷಣೆ ಪಡೆಯುವುದರ ಜತೆಗೆ ನಿಮ್ಮ ಅಂದವನ್ನು ಹೆಚ್ಚಿಸುತ್ತದೆ.
ಡೆನಿಮ್ ಪಫ್ ಸ್ಲೀವ್ ಟಾಪ್ ಗಳು ಕೂಡ ಚಳಿಗಾಲದ ಫ್ಯಾಷನ್ ಟ್ರೆಂಡ್ ಡ್ರೆಸ್ ಆಗಿದೆ. ಇದಕ್ಕೆ ತಕ್ಕ ಮೇಕಪ್ ಮಾಡಿಕೊಂಡರೆ ಸಖತ್ ಆಗಿ ಕಾಣಬಹುದು.