ಬಾಂಬೆ ಹಲ್ವಾ ಕಾರ್ನ್ ಫ್ಲೋರ್ ನಿಂದ ಮಾಡುವ ಸ್ವೀಟ್ ಡಿಶ್. ಇದನ್ನು ಜಗಿದು ಜಗಿದು ತಿನ್ನೋದ್ರಲ್ಲಿ ಇರೋ ಮಜಾನೇ ಬೇರೆ. ದೀಪಾವಳಿ ಮತ್ತು ನವರಾತ್ರಿಯಲ್ಲಿ ಹೆಚ್ಚಾಗಿ ಬಾಂಬೆ ಹಲ್ವಾ ಮಾಡೋದು ಸಂಪ್ರದಾಯ. ಇದನ್ನು ತಯಾರಿಸೋದು ಕೂಡ ಬಹಳ ಸುಲಭ.
ಬೇಕಾಗುವ ಸಾಮಗ್ರಿ : ಅರ್ಧ ಕಪ್ ಕಾರ್ನ್ ಫ್ಲೋರ್, ಒಂದೂವರೆ ಕಪ್ ನೀರು, ಒಂದೂಕಾಲು ಕಪ್ ಸಕ್ಕರೆ, ಒಂದು ಕಪ್ ನೀರು, 1 ಚಮಚ ನಿಂಬೆ ರಸ, 4-5 ಚಮಚ ತುಪ್ಪ, 10 ಹೆಚ್ಚಿದ ಗೋಡಂಬಿ, ಕಾಲು ಚಮಚ ಏಲಕ್ಕಿ ಪುಡಿ, ಆರೇಂಜ್ ಫುಡ್ ಕಲರ್, ಹೆಚ್ಚಿದ 5 ಬಾದಾಮಿ.
ತಯಾರಿಸುವ ವಿಧಾನ : ದೊಡ್ಡ ಬೌಲ್ ತೆಗೆದುಕೊಂಡು ಅದರಲ್ಲಿ ಕಾರ್ನ್ ಫ್ಲೋರ್ ಮತ್ತು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇನ್ನು ಅರ್ಧ ಕಪ್ ನಷ್ಟು ನೀರು ಬೆರೆಸಿ ಮಿಕ್ಸ್ ಮಾಡಿ ಪಕ್ಕಕ್ಕೆ ಇಡಿ. ದೊಡ್ಡದೊಂದು ಬಾಣಲೆ ತೆಗೆದುಕೊಂಡು ನೀರು ಮತ್ತು ಸಕ್ಕರೆ ಬೆರೆಸಿ ಕುದಿಸಿ.
ಕುದಿಯುತ್ತಿರುವ ಸಕ್ಕರೆ ಪಾಕದಲ್ಲಿ ಕಾರ್ನ್ ಫ್ಲೋರ್ ಮಿಶ್ರಣವನ್ನು ಹಾಕಿ. ಮಧ್ಯಮ ಉರಿಯಲ್ಲಿ ಅದನ್ನು ಕೈಯಾಡಿಸುತ್ತಾ ಬನ್ನಿ. ಕಾರ್ನ್ ಫ್ಲೋರ್ ಮಿಶ್ರಣ ಕುದಿಯಲು ಆರಂಭಿಸಿ ಗಟ್ಟಿಯಾಗುತ್ತದೆ. ಕೂಡಲೇ ನಿಂಬೆರಸ ಬೆರೆಸಿ. ಮಿಶ್ರಣ ಸಂಪೂರ್ಣ ಗಟ್ಟಿಯಾಗುವವರೆಗೆ ತಿರುವುತ್ತಿರಿ. ನಂತರ ಒಂದು ಚಮಚದಷ್ಟು ತುಪ್ಪ ಹಾಕಿ. ಮಿಶ್ರಣ ತುಪ್ಪವನ್ನು ಹೀರಿಕೊಳ್ಳುವವರೆಗೂ ತಿರುವುತ್ತಲೇ ಇರಿ.
ನಂತರ ಇನ್ನೊಂದು ಚಮಚ ತುಪ್ಪ ಹಾಕಿ ಮಿಶ್ರಣಕ್ಕೆ ಹೊಳಪು ಬರುವವರೆಗೂ ತಿರುವಿರಿ. ಮಿಶ್ರಣ ಪಾರದರ್ಶಕವಾಗಿ ಬದಲಾಗುತ್ತದೆ. ತುಪ್ಪ ಮೇಲೆ ಬರಲಾರಂಭಿಸುತ್ತದೆ. ಆಗ ಫುಡ್ ಕಲರ್, ಏಲಕ್ಕಿ ಪುಡಿ ಹಾಗೂ ಹೆಚ್ಚಿದ ಗೋಡಂಬಿ ಬೆರೆಸಿ. ಮಿಶ್ರಣ ಉಂಡೆಯಾಗುವವರೆಗೆ ತಿರುವಿರಿ. ನಂತರ ಮಿಶ್ರಣವನ್ನು ಟ್ರೇನಲ್ಲಿ ಹಾಕಿ ಲೆವೆಲ್ ಮಾಡಿ. ಹೆಚ್ಚಿದ ಗೋಡಂಬಿ ಹಾಕಿ ಅಲಂಕರಿಸಿ. ಒಂದು ಗಂಟೆ ಬಿಟ್ಟು ಬೇಕಾದ ಆಕಾರದಲ್ಲಿ ಕತ್ತರಿಸಿದರೆ ಬಾಂಬೆ ಹಲ್ವಾ ಸವಿಯಲು ಸಿದ್ಧ.