ದೀಪಾವಳಿ ಹಬ್ಬ ಬರುತ್ತಲೇ ಮಹಿಳೆಯರು ಮನೆ, ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸಲು ಅಣಿಯಾಗುತ್ತಾರೆ. ಅಡುಗೆಮನೆ ನೋಡಲು ಚಿಕ್ಕದೆನಿಸಿದರೂ ಅದರ ಸ್ವಚ್ಛತೆಗೆ ಮಹಿಳೆಯರು ತುಂಬಾ ಹೆಣಗಾಡುತ್ತಾರೆ. ಹಾಗಂತ ಅಡುಗೆಮನೆಯ ಸ್ವಚ್ಛತೆಯನ್ನು ಕಡೆಗಣಿಸುವಂತಿಲ್ಲ. ಏಕೆಂದರೆ ಅದು ನಮ್ಮ ಆರೋಗ್ಯದ ಪ್ರಶ್ನೆ. ಅಡುಗೆಕೋಣೆ ಸ್ವಚ್ಛವಾಗಿದ್ದಾಗ ಮಾತ್ರ ಅಲ್ಲಿ ಆರೋಗ್ಯಕರವಾದ ಅಡುಗೆ ಸಿದ್ಧವಾಗಲು ಸಾಧ್ಯ.
ಅಡುಗೆಮನೆಯ ಟೈಲ್ಸ್, ಅಡುಗೆಕಟ್ಟೆ, ಬೇಸಿನ್ ಮುಂತಾದವುಗಳ ಮೇಲೆ ಉಂಟಾಗುವ ಕಲೆ, ಜಿಡ್ಡುಗಳನ್ನು ತೆಗೆಯಲು ಕೆಲವು ಸುಲಭ ಉಪಾಯಗಳು ಹೀಗಿವೆ.
ಅಡುಗೆಮನೆಯಲ್ಲಿ ಗ್ಯಾಸ್ ಕಟ್ಟೆ, ಟೈಲ್ಸ್ ಗಳು ಕಲೆಯಾಗುವುದು ಸರ್ವೇಸಾಮಾನ್ಯ. ಅಂತಹ ಕಲೆಗಳನ್ನು ಹೋಗಲಾಡಿಸಲು ಪಾತ್ರೆ ತೊಳೆಯುವ ಸ್ಕ್ರಬರ್ ಗಳಿಗೆ ಸಾಬೂನು ಅಥವಾ ಸರ್ಫ್ ಎಕ್ಸೆಲ್ ಮುಂತಾದವುಗಳನ್ನು ಬಳಸಿ ಟೈಲ್ಸ್ ಗಳನ್ನು ಸ್ವಚ್ಛಗೊಳಿಸಿ. ನಂತರ ಸ್ವಚ್ಛವಾದ ಬಟ್ಟೆಯಿಂದ ಉಜ್ಜಿದರೆ ಟೈಲ್ಸ್ ಗಳು ಹೊಳೆಯುತ್ತವೆ.
ಅಡುಗೆಕೋಣೆಯ ಟೈಲ್ಸ್ ಮೇಲೆ ಇನ್ನೂ ಹೆಚ್ಚಿನ ರೀತಿಯ ಜಿಡ್ಡುಗಳು ಉಂಟಾದಲ್ಲಿ ವಿನೆಗರ್, ಎಸಿಡ್, ಬೇಕಿಂಗ್ ಸೋಡಾ, ಅಮೋನಿಯಾ ಅಥವಾ ಬ್ಲೀಚ್ ಗಳನ್ನು ಕೂಡಾ ಬಳಸಬಹುದು.
ಅಡುಗೆಕೋಣೆಯ ಬೇಸಿನ್ ಸ್ವಚ್ಛತೆ ಕೂಡ ಮುಖ್ಯವಾಗಿರುತ್ತದೆ. ಸ್ವಲ್ಪ ನಿಷ್ಕಾಳಜಿ ಮಾಡಿದರೂ ಬೇಸಿನ್ ನಿಂದ ದುರ್ವಾಸನೆ ಬರುವ ಸಾಧ್ಯತೆ ಇರುತ್ತದೆ. ಬೇಸಿನ್ ಸ್ವಚ್ಛಗೊಳಿಸಬೇಕಾದರೆ ಮೊದಲು ಬೇಸಿನ್ ಗೆ ಬಿಸಿಯಾದ ನೀರನ್ನು ಹಾಕಿ ನಂತರ ಅದಕ್ಕೆ ವಿನೆಗರ್ ಹಾಕಿ. ಬೇಸಿನನ್ನು ಬೇಕಿಂಗ್ ಪೌಡರ್ ನಿಂದ ಸ್ವಚ್ಛಗೊಳಿಸಿದಲ್ಲಿ ಬೇಸಿನ್ ಹೊಳಪು ಮರುಕಳಿಸುತ್ತದೆ. ಬೇಸಿನ್ ನಲ್ಲಿನ ನಲ್ಲಿಗಳನ್ನು ಸಾಬೂನು ಅಥವಾ ಸೋಪಿನ ಪುಡಿಗಳಿಂದ ಸ್ವಚ್ಛಗೊಳಿಸಬಹುದು. ಆದರೆ ಬೇಸಿನ್, ನಲ್ಲಿಗಳು ಸ್ಟೀಲ್ ನದ್ದಾಗಿದ್ದರೆ ಯಾವುದೇ ಕಾರಣಕ್ಕೂ ಎಸಿಡ್ ಬಳಸಬೇಡಿ. ಸ್ಟೀಲ್ ಬೇಸಿನ್ ಗೆ ಎಸಿಡ್ ಬಳಸುವುದರಿಂದ ಬೇಸಿನ್ ಮೇಲೆ ಶಾಶ್ವತ ಕಲೆಗಳು ಉಂಟಾಗುತ್ತವೆ.
ಅಡುಗೆಮನೆಯ ನೆಲವನ್ನು ಸ್ವಚ್ಛಗೊಳಿಸುವುದು ಬಹಳ ಕಷ್ಟದ ಕೆಲಸ. ಇದಕ್ಕಾಗಿ ಸೋಪಿನ ಪೌಡರ್ ಗಳ ನೀರು ಅಥವಾ ಬಟ್ಟೆ ತೊಳೆಯುವ ಸೋಪನ್ನು ನೀರಿಗೆ ಹಾಕಿ ಆ ನೀರಿನಿಂದ ನೆಲವನ್ನು ಸ್ವಚ್ಛಗೊಳಿಸಬಹುದು. ನೆಲವನ್ನು ಸ್ವಚ್ಛಗೊಳಿಸಲು ಬಿಸಿನೀರನ್ನು ಬಳಸಬಹುದು.
ಗ್ಯಾಸ್ ಸ್ಟೋವ್ ಸ್ವಚ್ಛಗೊಳಿಸುವುದು ಮಹಿಳೆಯರಿಗೆ ತಲೆನೋವಿನ ಕೆಲಸ. ಇವುಗಳ ಮೇಲೆ ಉಂಟಾಗುವ ಎಣ್ಣೆ ಪದಾರ್ಥಗಳ ಕೊಳೆಯನ್ನು ಹೋಗಲಾಡಿಸಲು ಯಾವುದೇ ಕ್ಲೀನರ್ ಗಳನ್ನು ಬಳಸಬಹುದು. ಸೋಪಿನ ನೀರಿನಿಂದಲೂ ಸ್ವಚ್ಛಗೊಳಿಸಬಹುದು. ಹಾಗೆ ಸ್ವಚ್ಛಗೊಳಿಸುವಾಗ ಬರ್ನರ್ ಗಳನ್ನು ತೆಗೆದಿಟ್ಟುಕೊಳ್ಳುವುದು ಉತ್ತಮ.