ಒಬ್ಬಟ್ಟು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಹಬ್ಬ ಹರಿದಿನಗಳು ಬಂತೆಂದರೆ ಸಾಕು ಮನೆಯಲ್ಲಿ ಒಬ್ಬಟ್ಟಿನ ತಯಾರಿ ಮಾಡಿಕೊಳ್ಳುವುದಕ್ಕೆ ಶುರುಮಾಡುತ್ತೇವೆ. ಕೊಬ್ಬರಿ ಒಬ್ಬಟ್ಟು, ಕಡಲೇಬೇಳೆ ಒಬ್ಬಟ್ಟು ನೀವು ಮನೆಯಲ್ಲಿ ಟ್ರೈ ಮಾಡಿರುತ್ತೀರಿ. ಇಂದು ತೊಗರಿಬೇಳೆಯಲ್ಲಿ ಒಬ್ಬಟ್ಟನ್ನು ಹೇಗೆ ಮಾಡುವುದು ಎಂಬುದರ ಕುರಿತು ಇಲ್ಲಿದೆ ನೋಡಿ ಮಾಹಿತಿ.
ಬೇಕಾಗುವ ಸಾಮಾಗ್ರಿಗಳು-1 ಕಪ್ ತೊಗರಿಬೇಳೆ, ಒಂದು ಕಪ್ ಬೆಲ್ಲ, ½ ಟೀ ಸ್ಪೂನ್ – ಏಲಕ್ಕಿ ಪುಡಿ, ¼ ಕಪ್ ತೆಂಗಿನತುರಿ. ಇದನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಸ್ವಲ್ಪ ತುಪ್ಪ, ಸ್ವಲ್ಪ ಎಣ್ಣೆ.
ಇನ್ನು ಒಬ್ಬಟ್ಟು ಹಿಟ್ಟಿಗೆ ಬೇಕಾಗುವ ಸಾಮಾಗ್ರಿ-2 ಕಪ್ ಮೈದಾ ಹಿಟ್ಟು, ¼ ಕಪ್ ಚಿರೋಟಿ ರವೆ, ಚಿಟಿಕೆ ಅರಿಶಿನ, ¼ ಕಪ್ ಎಣ್ಣೆ.
ಮಾಡುವ ವಿಧಾನ: ಮೊದಲು ಒಂದು ಬೌಲ್ ಗೆ ಮೈದಾ ಹಿಟ್ಟನ್ನು ಜರಡಿ ಹಿಡಿದುಕೊಳ್ಳಿ. ನಂತರ ಇದಕ್ಕೆ ಚಿರೋಟಿ ರವೆ ಸೇರಿಸಿ. ನಂತರ ಚಿಟಿಕೆ ಅರಿಶಿನ, ಚಿಟಿಕೆ ಉಪ್ಪು ಹಾಕಿ ಮಿಶ್ರಣ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಚೆನ್ನಾಗಿ ನಾದಿಕೊಳ್ಳಿ. ಆಮೇಲೆ ಸ್ವಲ್ಪ ಸ್ವಲ್ಪ ಎಣ್ಣೆ ಸೇರಿಸಿ ಮೆತ್ತಗಾಗುವವರೆಗೆ ನಾದಿಕೊಳ್ಳಿ. ಇದರ ಮೇಲೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಒಂದು ತಟ್ಟೆ ಮುಚ್ಚಿ 1 ಗಂಟೆ ಹಾಗೇ ಬಿಟ್ಟು ಬಿಡಿ.
ಮೊದಲು ಬೇಳೆಯನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ನೀರು ಹಾಕಿ ಬೇಯಿಸಿಕೊಳ್ಳಿ. ಕುಕ್ಕರ್ ನಲ್ಲಿ ಇಡುವುದು ಬೇಡ. ಬೇಳೆ ಹದವಾಗಿ ಬೆಂದರೆ ಸಾಕು. ತುಂಬಾ ಬೇಯಿಸಿಕೊಳ್ಳುವ ಅಗತ್ಯವಿಲ್ಲ. ಬೆಂದ ಬೇಳೆಯನ್ನು ಸೋಸಿಕೊಳ್ಳಿ. ಬೇಳೆ ಬೇಯಿಸಿದ ನೀರನ್ನು ಚೆಲ್ಲಬೇಡಿ. ನಂತರ ಬೇಳೆಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಅದಕ್ಕೆ ಬೆಲ್ಲವನ್ನು ಸೇರಿಸಿ 2 ನಿಮಿಷ ಕೈಯಾಡಿಸಿ. ಬೆಲ್ಲ ಕರಗುವವರಗೆ ಸ್ವಲ್ಪ ಕೈಯಾಡಿಸಿ. ನಂತರ ಇದಕ್ಕೆ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಿ.
ನಂತರ ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಮಿಕ್ಸಿ ಜಾರಿಗೆ ಹಾಕಿಕೊಂಡು ಸ್ವಲ್ಪ ತರಿ ತರಿಯಾಗಿ ರುಬ್ಬಿಕೊಳ್ಳಿ. ನೀರು ಸೇರಿಸಬೇಡಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿ. ಅದಕ್ಕೆ ತೆಂಗಿನ ತುರಿ ಮಿಶ್ರಣ ಮಾಡಿಕೊಳ್ಳಿ. ಇದರಿಂದ ಸಣ್ಣ ಸಣ್ಣ ಉಂಡೆ ಕಟ್ಟಿಕೊಳ್ಳಿ. ಒಬ್ಬಟ್ಟು ಹಿಟ್ಟಿನಿಂದ ಕೂಡ ಉಂಡೆ ಕಟ್ಟಿಕೊಂಡು. ಚಿಕ್ಕದ್ದಾಗಿ ಚಪಾತಿ ರೀತಿ ಮಾಡಿ. ಅದರ ಮೇಲೆ ಹೂರಣದ ಉಂಡೆ ಹಿಟ್ಟು ಮಡಚಿ. ತೆಳುವಾಗಿ ಲಟ್ಟಿಸಿಕೊಳ್ಳಿ. ತವಾವನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ತುಸು ಎಣ್ಣೆ ಸವರಿ ಮಾಡಿಟ್ಟುಕೊಂಡ ಒಬ್ಬಟ್ಟನ್ನು ಅದರ ಮೇಲೆ ಹಾಕಿ ಎರಡು ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. ತುಪ್ಪದ ಜತೆ ತಿನ್ನಲು ಚೆನ್ನಾಗಿರುತ್ತೆ.