ಶ್ರಾವಣ ಮಾಸ ಬಂತೆಂದರೆ ಹಬ್ಬಗಳದ್ದೇ ಸಾಲು. ಹಬ್ಬಕ್ಕೆ ಏನಾದರೂ ಸಿಹಿ ಮಾಡಿಕೊಂಡು ತಿಂದರೆ ಚೆನ್ನಾಗಿರುತ್ತದೆ. ಹಾಗಾಗಿ ಮನೆಯಲ್ಲಿ ಸುಲಭವಾಗಿ ಮಾಡಿ ಈ ಹುರಿಗಡಲೆ ತಂಬಿಟ್ಟು. ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
3 ಕಪ್ – ಹುರಿಗಡಲೆ ಹಿಟ್ಟು, 3 ಕಪ್ – ಕೊಬ್ಬರಿ ತುರಿ, 2¼ ಕಪ್ – ಬೆಲ್ಲ, 1.5 ಕಪ್ – ತುಪ್ಪ, ಚಿಟಿಕೆ – ಏಲಕ್ಕಿ ಪುಡಿ.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಕೊಬ್ಬರಿ ತುರಿ ಹಾಕಿ ಸಣ್ಣ ಉರಿಯಲ್ಲಿ 2 ನಿಮಿಷಗಳ ಕಾಲ ಹುರಿದು ಒಂದು ಪಾತ್ರೆಗೆ ತೆಗೆದಿಟ್ಟುಕೊಳ್ಳಿ.
ನಂತರ ಅದೇ ಬಾಣಲೆಗೆ ತುಪ್ಪ ಹಾಕಿ ಅದಕ್ಕೆ ಬೆಲ್ಲ ಸೇರಿಸಿಕೊಳ್ಳಿ. ಇವರೆಡು ಚೆನ್ನಾಗಿ ಮಿಶ್ರಣವಾಗಲಿ. ಬೆಲ್ಲ ಎಳೆ ಪಾಕ ಬಂದ ಕೂಡಲೇ ಇದಕ್ಕೆ ಸ್ವಲ್ಪ ಸ್ವಲ್ಪವೇ ಹುರಿಗಡಲೆ ಹಿಟ್ಟು ಹಾಕಿ ಮಿಶ್ರಣ ಮಾಡಿ ಇದರ ಜತೆಗೆ ಕೊಬ್ಬರಿ ತುರಿ ಕೂಡ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಏಲಕ್ಕಿ ಪುಡಿ ಸೇರಿಸಿ ಕೈಯಾಡಿಸಿ ಗ್ಯಾಸ್ ಆಫ್ ಮಾಡಿ. ಬಿಸಿ ಸ್ವಲ್ಪ ಆರಿದ ಮೇಲೆ ಕೈಗೆ ತುಪ್ಪ ಸವರಿಕೊಂಡು ಉಂಡೆಕಟ್ಟಿ.