ದಿಬ್ಬಾ ರೋಟಿ ಇದು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಮಾಡುವ ತಿಂಡಿ. ಬೆಳಗ್ಗಿನ ತಿಂಡಿ, ರಾತ್ರಿ ಊಟ ಹಾಗೂ ಸ್ನ್ಯಾಕ್ಸ್ ಗೂ ಇದನ್ನು ಮಾಡಬಹುದು. ಮಾಡುವುದಕ್ಕೂ ಸುಲಭ ಹಾಗೂ ರುಚಿ ಕೂಡ ಚೆನ್ನಾಗಿದೆ. ದಿನಾ ತಿಂಡಿ, ದೋಸೆ ತಿಂದು ಬೇಜಾರಾಗಿದ್ದರೆ ಇದನ್ನು ಮಾಡಿಕೊಂಡು ಒಮ್ಮೆ ತಿಂದು ನೋಡಿ.
ಬೇಕಾಗುವ ಸಾಮಗ್ರಿಗಳು:
½ ಕಪ್ – ಉದ್ದಿನಬೇಳೆ, 1 ¼ ಕಪ್ – ಅಕ್ಕಿ ರವೆ, ಉಪ್ಪು – ರುಚಿಗೆ ತಕ್ಕಷ್ಟು, ಶುಂಠಿ – ಇಂಚು, ಹಸಿಮೆಣಸು – 1, ಜೀರಿಗೆ – 1 ಟೀ ಸ್ಪೂನ್, 4 ಟೇಬಲ್ ಸ್ಪೂನ್ – ಎಣ್ಣೆ.
ಮಾಡುವ ವಿಧಾನ:
ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು 4 ಗಂಟೆಗಳ ಕಾಲ ನೆನೆಸಿಡಿ. ಹಾಗೇಯೇ ಅಕ್ಕಿ ರವೆಯನ್ನು ತೊಳೆದು ನೆನೆಸಿಡಿ. ಉದ್ದಿನಬೇಳೆಗೆ ಸ್ವಲ್ಪ ನೀರು ಸೇರಿಸಿಕೊಂಡು ನಯವಾಗಿ ರುಬ್ಬಿಕೊಂಡು ಒಂದು ಪಾತ್ರೆಗೆ ತೆಗೆದುಕೊಳ್ಳಿ. ನಂತರ ರವೆಯ ನೀರನ್ನು ಹಿಂಡಿ ಇದನ್ನು ಉದ್ದಿನ ಮಿಶ್ರಣಕ್ಕೆ ಹಾಕಿ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 8 ಗಂಟೆಗಳ ಕಾಲ ಹಾಗೇಯೇ ಇಟ್ಟು ಬಿಡಿ. ಒಂದು ಮಿಕ್ಸಿ ಜಾರಿಗೆ ಶುಂಠಿ, ಹಸಿಮೆಣಸು, ಜೀರಿಗೆ ಹಾಕಿ ತರಿತರಿಯಾಗಿ ರುಬ್ಬಿ ಇದನ್ನು ರುಬ್ಬಿದ ಉದ್ದಿನ ಮಿಶ್ರಣಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ.
ಕಡಾಯಿಯನ್ನು ಗ್ಯಾಸ್ ಮೇಲೆ ಇಟ್ಟು ಅದು ಬಿಸಿಯಾಗುತ್ತಲೆ ಅದಕ್ಕೆ 4 ಟೇಬಲ್ ಸ್ಪೂನ್ ಎಣ್ಣೆ ಹಾಕಿ ನಂತರ ಒಂದು ಸೌಟಿನಷ್ಟು ಈ ಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಒಂದು ಕಡೆ ಬೇಯುತ್ತಾ ಬರುತ್ತಿದ್ದಂತೆ ಮತ್ತೊಂದು ಕಡೆ ತಿರುಗಿಸಿ ಹಾಕಿ. ಸಾಂಬಾರು, ಚಟ್ನಿ ಜತೆ ಸವಿಯಿರಿ.