ಬೇಕಾಗುವ ಸಾಮಾಗ್ರಿಗಳು:
ದೋಸೆ ಅಕ್ಕಿ- 2 ಕಪ್, ಬೆಲ್ಲ- 1.5 ಕಪ್, ಕಪ್ಪು ಎಳ್ಳು- 1 ಟೀ ಸ್ಪೂನ್, ಏಲಕ್ಕಿ- ಚಿಟಿಕೆ, ಮೈದಾ- 3 ಟೀ ಸ್ಪೂನ್, ತುಪ್ಪ- 2 ಟೀ ಸ್ಪೂನ್, ತೆಂಗಿನತುರಿ- 2 ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಸೋಡಾ- ಚಿಟಿಕೆ.
ಮಾಡುವ ವಿಧಾನ:
ಬೆಲ್ಲಕ್ಕೆ ಅರ್ಧ ಕಪ್ ನೀರು ಹಾಕಿ ಕರಗಿಸಿ. ಬಳಿಕ ತೆಂಗಿನತುರಿಯನ್ನು ತುಪ್ಪದಲ್ಲಿ ಹುರಿಯಿರಿ. ಬಳಿಕ 5 ಗಂಟೆ ನೆನೆಸಿದ ದೋಸೆ ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ, ಇದಕ್ಕೆ ರುಚಿಗೆ ತಕ್ಕಷ್ಟು, ಉಪ್ಪು, ಏಲಕ್ಕಿ, ಕರಗಿಸಿದ ಬೆಲ್ಲವನ್ನು ಸೋಸಿ ಹಾಕಿಕೊಂಡು ರುಬ್ಬಿಕೊಳ್ಳಿ. ಬಳಿಕ ಈ ಹಿಟ್ಟಿಗೆ ಕಪ್ಪು ಎಳ್ಳು ಹಾಗೂ ಮೈದಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಹುರಿದಿಟ್ಟ ತೆಂಗಿನತುರಿಯನ್ನು ಹಾಕಿ ಮುಚ್ಚಿಡಿ. 7 ರಿಂದ 8 ಗಂಟೆ ಕಾಲ ಹಾಗೆ ಇಡಿ. ದೋಸೆ ಹಿಟ್ಟಿನ ಹದಕ್ಕಿಂತ ಸ್ವಲ್ಪ ತೆಳ್ಳಗಿರಲಿ. ಒಂದು ಬಾಣಲೆಯನ್ನು ಸ್ಟೌ ನಲ್ಲಿ ಇಟ್ಟು ಕರಿಯಲು ಎಣ್ಣೆ ಹಾಕಿ. ಈ ವೇಳೆ ಹಿಟ್ಟಿಗೆ ಸ್ವಲ್ಪ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ. ನಂತರ ಎಣ್ಣೆ ಬಿಸಿಯಾದಾಗ ಹಿಟ್ಟನ್ನು ಎಣ್ಣೆಗೆ ಹಾಕಿ, ಈ ವೇಳೆ ಪೂರಿಯಂತೆ ಉಬ್ಬಿ ಬರುತ್ತದೆ. ಬಣ್ಣ ಬದಲಾದಾಗ ಸರ್ವಿಂಗ್ ಪ್ಲೇಟ್ ಗೆ ಎತ್ತಿಟ್ಟರೆ ರುಚಿಯಾದ ನೇಯಪ್ಪ ಸವಿಯಲು ಸಿದ್ಧ.