ನಮ್ಮ ನಾಲಿಗೆ ಹೆಚ್ಚಾಗಿ ಬಯಸುವುದು ಕುರುಕಲು ತಿಂಡಿಗಳನ್ನೇ. ಅದರಲ್ಲಿಯೂ ಎಲೆಕೋಸಿನ ಬೋಂಡಾ ತಿನ್ನುತ್ತ ಚಹಾ ಹೀರುವ ಮಜವೇ ಬೇರೆ ! ಅಂತಹ ರುಚಿ ಹೊಂದಿರುವ ಎಲೆಕೋಸಿನ ಬೋಂಡಾವನ್ನು ಮನೆಯಲ್ಲಿಯೂ ಮಾಡಿ ಸವಿಯಬಹುದು.
ಬೇಕಾದ ಸಾಮಗ್ರಿ:
ಚಿಕ್ಕ ಎಲೆಕೋಸು, ಅರ್ಧ ಕಿಲೋ ಕಡಲೆ ಹಿಟ್ಟು, 1 ಲೋಟ ಅಕ್ಕಿ ಹಿಟ್ಟು, 1 ಚಮಚ ಕಾರದಪುಡಿ, 1 ಚಮಚ ಗರಂ ಮಸಾಲೆ, 2 ಚಮಚ ಸಾರಿನಪುಡಿ, ಕರಿಬೇವು, ಕೊತ್ತಂಬರಿ ಸೊಪ್ಪು, 2 ಹಸಿ ಮೆಣಸಿನಕಾಯಿ, 4 ಈರುಳ್ಳಿ ಮತ್ತು ಅಡುಗೆ ಎಣ್ಣೆ, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವುದು ಹೀಗೆ:
ಮೊದಲು ಎಲೆಕೋಸನ್ನು ನೀರಿನಿಂದ ತೊಳೆದು ಸಣ್ಣಗೆ ಹೆಚ್ಚಿ, ಅದೇ ರೀತಿ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ನಂತರ ಎಲೆಕೋಸು, ಈರುಳ್ಳಿಯನ್ನು ಸೇರಿಸಿ ಅದಕ್ಕೆ ಕಡಲೆಹಿಟ್ಟು, ಅಕ್ಕಿಹಿಟ್ಟು, ಖಾರದಪುಡಿ, ಗರಂ ಮಸಾಲೆ, ಸಾರಿನ ಪುಡಿ ಇಲ್ಲವೇ ಸಾಂಬಾರಪುಡಿ, ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಈರುಳ್ಳಿ ಹಾಕಿ ನೀರಿನಲ್ಲಿ ಚೆನ್ನಾಗಿ ಹದ ಬರುವಂತೆ ಕಲಸಿಕೊಳ್ಳಬೇಕು.
ಇದರ ಜತೆಗೆ ಕೊತ್ತಂಬರಿ ಸೊಪ್ಪು, ಕರಿಬೇವು ಹಾಗೂ ಹಸಿ ಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿ ಹಾಕಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಹದವಾದ ಹಿಟ್ಟನ್ನು ಉಂಡೆ ತರಹ ಮಾಡಿ ಎಣ್ಣೆಯಲ್ಲಿ ಹದವಾಗಿ ಕರಿದರೆ ಎಲೆಕೋಸಿನ ಬೋಂಡಾ ಸಿದ್ದ. ಸಂಜೆ ಸಮಯದಲ್ಲಿ ಕಾಫಿ, ಚಹಾದ ಜತೆಗೆ ಸವಿಯಲು ಇದು ಅತ್ಯುತ್ತಮ.