ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ಕೇವಲ ತಿನ್ನುವುದಕ್ಕೆ ಮಾತ್ರವಲ್ಲದೆ, ತ್ವಚೆಯ ರಕ್ಷಣೆಗೆ ಸಹಕಾರಿಯಾಗಿದೆ. ಇದರಲ್ಲಿ ಯಥೇಚ್ಛವಾದ ವಿಟಮಿನ್ ಎ, ಬಿ6, ಸಿ ಅಂಶವಿದೆ. ಹಾಗಾಗಿ ಇದು ತ್ವಚೆಯ ಆರೈಕೆಗೆ ಪರಿಣಾಮಕಾರಿಯಾಗಿದೆ.
ಕಲ್ಲಂಗಡಿ ಹಣ್ಣಿನ ಮಸಾಜ್ ನಿಂದ ಕಾಂತಿಯುತ ತ್ವಚೆ ಪಡೆಯಬಹುದು. ಒಣ ಚರ್ಮವಿದ್ದರೆ, ತ್ವಚೆ ಸುಕ್ಕಾಗಿದ್ದರೆ ಈ ಹಣ್ಣಿನ ಫೇಸ್ ಪ್ಯಾಕ್ ಬಳಸಬಹುದು. ಹಾಗಾದರೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಹೇಗೆ ಕಲ್ಲಂಗಡಿ ಹಣ್ಣಿನ ಫೇಸ್ ಪ್ಯಾಕ್ ಮಾಡಬಹುದು ನೋಡಿ.
ಕಲ್ಲಂಗಡಿ ಹಣ್ಣು ಹಾಗೂ ಜೇನು :
2 ಚಮಚ ಕಲ್ಲಂಗಡಿ ಹಣ್ಣಿನ ರಸ ಮತ್ತು 2 ಚಮಚ ಜೇನನ್ನು ಬೆರೆಸಿ ಮುಖಕ್ಕೆ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖ ತೊಳೆಯಬೇಕು.
ಕಲ್ಲಂಗಡಿ ಹಣ್ಣು ಮತ್ತು ಹಾಲು :
ಕಲ್ಲಂಗಡಿ ಹಣ್ಣಿನ ರಸಕ್ಕೆ ಸ್ವಲ್ಪ ಹಾಲನ್ನು ಸೇರಿಸಿ. ಇದಕ್ಕೆ ವಿಟಮಿನ್ ಇ ಟ್ಯಾಬ್ಲೆಟ್ ನಲ್ಲಿರುವ ದ್ರವವನ್ನು ಬೆರೆಸಿ ಮುಖಕ್ಕೆ ಹಚ್ಚಿ. ನಂತರ 20 ನಿಮಿಷಗಳ ಬಳಿಕ ಮುಖ ತೊಳೆಯಬೇಕು.
ಕಲ್ಲಂಗಡಿ ಹಣ್ಣು ಮತ್ತು ಸೌತೆಕಾಯಿ :
1 ಚಮಚ ಕಲ್ಲಂಗಡಿ ಹಣ್ಣಿನ ರಸ ಮತ್ತು ಸೌತೆಕಾಯಿ ತಿರುಳು ಎರಡನ್ನು ಸೇರಿಸಿ ಪೇಸ್ಟ್ ರೆಡಿ ಮಾಡಿಕೊಳ್ಳಬೇಕು. ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ಮುಖ ತೊಳೆಯಬೇಕು.
ಕಲ್ಲಂಗಡಿ ಹಣ್ಣು ಮತ್ತು ಬಾಳೆಹಣ್ಣು :
ಈ ಎರಡನ್ನು ಕಿವುಚಿ ಪೇಸ್ಟ್ ರೆಡಿ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ಮುಖ ತೊಳೆಯಬೇಕು.
ಕಲ್ಲಂಗಡಿ ಹಣ್ಣು ಮತ್ತು ಸಕ್ಕರೆ :
2 ಚಮಚ ಸಕ್ಕರೆಯೊಂದಿಗೆ ಕಲ್ಲಂಗಡಿ ಹಣ್ಣಿನ ತಿರುಳನ್ನು ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಿ. ಅದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ಬಳಿಕ ಮುಖ ತೊಳೆಯಿರಿ.
ಕಲ್ಲಂಗಡಿ ಹಣ್ಣು ಮತ್ತು ಪಪ್ಪಾಯ :
ಈ 2 ಹಣ್ಣುಗಳ ತಿರುಳನ್ನು ತೆಗೆದುಕೊಂಡು ಪೇಸ್ಟ್ ಮಾಡಿ ನಂತರ ಮುಖಕ್ಕೆ ಹಚ್ಚಿ 20 ನಿಮಿಷಗಳ ಬಳಿಕ ಮುಖ ತೊಳೆಯಿರಿ. ವಾರಕ್ಕೊಮ್ಮೆ ಯಾವುದಾದರೂ ಒಂದು ಈ ಫೇಸ್ ಪ್ಯಾಕ್ ಅನ್ನು ಟ್ರೈ ಮಾಡಿ ಸುಂದರ ತ್ವಚೆ ನಿಮ್ಮದಾಗಿಸಿಕೊಳ್ಳಿ.