ಬೀಟ್ರೂಟ್ ಒಂದು ಆರೋಗ್ಯಕಾರಿ ತರಕಾರಿ. ಇದನ್ನು ಹೆಚ್ಚಾಗಿ ಬಳಸುವುದರಿಂದ ದೇಹದಲ್ಲಿ ರಕ್ತ ಹೆಚ್ಚಿಸಿಕೊಳ್ಳಬಹುದು. ಅಲ್ಲದೇ ಹಸಿಯಾಗಿ ಇತರ ತರಕಾರಿಗಳೊಂದಿಗೆ ತಿನ್ನುವುದರಿಂದ ಮುಖದಲ್ಲಿ ಉಂಟಾಗುವ ಟ್ಯಾನ್ ಹೋಗಲಾಡಿಸಬಹುದು.
ಇನ್ನು ಇದನ್ನು ದಿನನಿತ್ಯದ ಊಟದಲ್ಲಿ ಸಾಂಬಾರ್, ಪಲ್ಯ, ಕೂಟು ತಯಾರಿಸಿ ಬಳಸಬಹುದು. ಬೀಟ್ರೂಟ್ ಕೂಟು ಅತ್ಯಂತ ಸುಲಭವಾದ ಮತ್ತು ಆರೋಗ್ಯಪೂರ್ಣವಾದ ಒಂದು ಪದಾರ್ಥ.
ಬೇಕಾಗುವ ವಸ್ತುಗಳು: ಒಂದು ಕಪ್ ಮಧ್ಯಮ ಗಾತ್ರದಲ್ಲಿ ಹೆಚ್ಚಿದ ಬೀಟ್ರೂಟ್ ಪೀಸ್ ಗಳು, 1 ಕಪ್ ದಪ್ಪಗಿನ ಮೊಸರು, 5 ಹಸಿ ಮೆಣಸಿನ ಕಾಯಿ, 1 ಕಪ್ ತೆಂಗಿನ ತುರಿ, 1 ಟೀ ಚಮಚ ಜೀರಿಗೆ, 1 ಟೀ ಚಮಚ ಸಾಸಿವೆ, ಒಗ್ಗರಣೆಗೆ ಅಗತ್ಯವಿರುವಷ್ಟು ಎಣ್ಣೆ, ಎರಡು ಒಣ ಮೆಣಸು, ಕರಿಬೇವಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಬೀಟ್ರೂಟ್ ನ್ನು ಸಿಪ್ಪೆ ಇರುವಾಗಲೇ ತೊಳೆದು ಬಳಿಕ ಸಿಪ್ಪೆ ತೆಗೆದು ಮಧ್ಯಮ ಗಾತ್ರದಲ್ಲಿ ಹೆಚ್ಚಿಕೊಳ್ಳಬೇಕು. ನಂತರ ಹೆಚ್ಚಿದ ಬೀಟ್ರೂಟ್ ಗೆ ಅಗತ್ಯವಿರುವಷ್ಟು ನೀರು ಸೇರಿಸಿ ಮೆತ್ತಗಾಗುವರೆಗೂ ಬೇಯಿಸಿಕೊಳ್ಳಬೇಕು. ಬೇಯಿಸುವಾಗ ಒಂದು ಚಿಟಿಕೆಯಷ್ಟು ಉಪ್ಪು ಸೇರಿಸಿಕೊಳ್ಳಿ. ತುರಿದ ತೆಂಗಿನ ಕಾಯಿಗೆ ಹಸಿಮೆಣಸು, ಸಾಸಿವೆ ಹಾಗೂ ಜೀರಿಗೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಕಾಯಿತುರಿಗೆ ಬೇಯಿಸಿಟ್ಟ ಬೀಟ್ರೂಟ್ ಸೇರಿಸಿ ಬಳಿಕ ಅದಕ್ಕೆ ಮೊಸರು ಸೇರಿಸಿ, ಅಗತ್ಯವಿರುವಷ್ಟು ಉಪ್ಪು ಸೇರಿಸಿ. ಬಳಿಕ ಎಣ್ಣೆ ಕಾಯಿಸಿ, ಸಾಸಿವೆ, ಒಣಮೆಣಸಿನ ಪೀಸ್, ಕರಿಬೇವಿನ ಎಲೆ ಸೇರಿಸಿ ಬೀಟ್ರೂಟ್ ಕೂಟಿನ ಮೇಲೆ ಹಾಕಿ. ಇದನ್ನು ಬಿಸಿಯಾದ ಅನ್ನದ ಜೊತೆ ಸವಿಯಬಹುದು.