ಮಂಡ್ಯ: ಮಕರ ಸಂಕ್ರಮಣ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಸಂಭ್ರಮ-ಸಡಗರದಿಂದ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತಿದೆ. ಮಕರ ಸಂಕ್ರಮಣದ ದಿನ ಸೂರ್ಯ ತನ್ನ ಪಥ ಬದಲಿಸಿ ಉತ್ತರಾಯಣಕ್ಕೆ ಬರುತ್ತಾನೆ. ಈ ಶುಭ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದ ಕಾವೇರಿ ತೀರದಲ್ಲಿರುವ ಚಂದ್ರವನ ಆಶ್ರಮದಲ್ಲಿನ ಕಾಶಿ ಚಂದ್ರಮೌಳೇಶ್ವರ ದೇಗುಲದಲ್ಲಿ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶಿಸುವುದು ಪದ್ಧತಿ.
ಆದರೆ ಈವರ್ಷ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸಿಲ್ಲ. ಮೋಡಕವಿದ ವಾತಾವರಣ, ಕೆಲವೆಡೆ ಬೆಳಿಗ್ಗೆಯಿಂದ ತುಂತುರು ಮಳೆಯಿರುವ ಕಾರಣಕ್ಕೆ ಸೂರ್ಯನ ಬೆಳಕು ಗೋಚರತೆಯಿಲ್ಲದ ಕಾರಣಕ್ಕೆ ಶಿವಲಿಂಗಕ್ಕೆ ಈಬಾರಿ ಸೂರ್ಯ ರಶ್ಮಿ ಬಿದ್ದಿಲ್ಲ ಎನ್ನಲಾಗಿದೆ.
ಆದರೆ ಪ್ರತಿವರ್ಷದಂತೆ ಈ ಬಾರಿ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸದಿರುವುದು ಭಕ್ತರಲ್ಲಿ, ಜನರಲ್ಲಿ ಸಹಜವಾಗಿ ಕಳವಳ, ಆತಂಕಕ್ಕೆ ಕಾರಣವಾಗಿದೆ. ಶಿವಲಿಂಗದ ಮೇಲೆ ಸೂರ್ಯ ಕಿರಣಗಳು ಬೀಳುವ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಬಂದ ಭಕ್ತರಿಗೆ ನಿರಾಸೆಯಾಗಿದೆ. ಇದು ಅನಾಹುತಗಳು ಸಂಭವಿಸುವ ಮುನ್ಸೂಚನೆಯೇ ಎಂಬ ಆತಂಕವನ್ನೂ ತಂದಿದೆ.
ಈ ಬಗ್ಗೆ ಮಾತನಾಡಿರುವ ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಈ ಬಾರಿ ಪ್ರಕೃಇ ವಿಕೋಪ ಸಂಭವಿಸುವ ಸಾಧ್ಯತೆ ಇದೆ. ಅತಿವೃಷ್ಟಿ, ಭೂಕಂಪ, ರಾಷ್ಟ್ರ-ರಾಷ್ಟ್ರಗಳ ನಡುವೆ ಯುದ್ಧದಂತಹ ಸಂಗತಿ ನಡೆಯಬಹುದು. ಇದೆಲ್ಲವೂ ಪ್ರಕ್ರಿತಿ ಮೇಲೆ ನಾವು ಮಾಡುತ್ತಿರುವ ಕೆಡುಕಿನಿಂದಾಗುತ್ತಿದೆ. ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸದಿರುವುದು ಯಾವುದೇ ಅವಘಡಕ್ಕೆ ಕಾರಣವಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.