ಬೆಂಗಳೂರು: ಈ ಬಾರಿ ಮಕರ ಸಂಕ್ರಮಣ ಹಬ್ಬಕ್ಕೆ ಸಾಲು ಸಾಲು ರಜೆಗಳು ಸಿಕ್ಕಿವೆ. ಹಾಗಾಗಿ ಹಬ್ಬಕ್ಕೆ ಊರಿಗೆ ಹೋಗುವವರ ಸಂಖ್ಯೆ ಹೆಚ್ಚಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ನವರು ಟಿಕೆಟ್ ದರವನ್ನು ದುಪ್ಪಟ್ಟು ಏರಿಸಿದ್ದಾರೆ.
ವರ್ಷದ ಮೊದಲ ಹಬ್ಬ ಸಂಕ್ರಾಂತಿಯಿಂದ ಜನವರಿ 26ರ ಗಣರಾಜ್ಯೋತ್ಸವದವರೆಗೂ ಖಾಸಗಿ ಬಸ್ ನವರು ಈಗಾಗಲೇ ಟಿಕೆಟ್ ದರ ಹೆಚ್ಚಿಸಿದ್ದಾರೆ. ಖಾಸಗಿ ಬಸ್ ಗಳ ಆನ್ ಲೈನ್ ಟಿಕೆಟ್ ದರ ಹೆಚ್ಚಿರುವುದನ್ನು ಕಂಡು ಪ್ರಯಾಣಿಕರು ಶಾಕ್ ಆಗಿದ್ದಾರೆ.
ಈ ನಡುವೆ ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗುವವರಿಗಾಗಿ ಜನರ ಅನುಕೂಲಕ್ಕೆ ಕೆ.ಎಸ್.ಆರ್.ಟಿ.ಸಿ 400 ಹೆಚ್ಚುವರಿ ಬಸ್ ಗಳನ್ನು ವ್ಯವಸ್ಥೆ ಮಾಡಿದೆ. ಖಾಸಗಿ ಬಸ್ ಗಳ ಸುಲಿಗೆ ಮಧ್ಯೆ ಇದು ಪ್ರಯಾಣಿಕರಿಗೆ ಕೊಂಚ ಸಮಾಧಾನ ತಂದಿದೆ.
ಖಾಸಗಿ ಬಸ್ ಗಳಲ್ಲಿ ಬೆಂಗಳೂರು-ಶಿವಮೊಗ್ಗ ಟಿಕೆಟ್ ದರ 1200-1600 ರೂಪಾಯಿ ಆಗಿದೆ. ಬೆಂಗಳೂರು-ಬೀದರ್ 1600-2000 ರೂ ಆಗಿದೆ.
ಬೆಂಗಳೂರು-ಹುಬ್ಬಳ್ಳಿ 1700-2500, ಬೆಂಗಳೂರು-ಮಂಗಳೂರು 1300-1700 ರೂಪಾಯಿ, ಬೆಂಗಳೂರು-ಕಲಬುರ್ಗಿ 1600-2200, ಬೆಂಗಳೂರು-ಮಡಿಕೇರಿ 1150-1600, ಬೆಂಗಳೂರು-ಬೆಳಗಾವಿ 1300-1800 ರೂ ಆಗಿದೆ.