ಇಂದು ದೇಶದಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ. ಇದನ್ನು ದೇಶಾದ್ಯಂತ ವಿವಿಧ ಹೆಸರುಗಳೊಂದಿಗೆ ಆಚರಿಸಲಾಗುತ್ತದೆ.
ಕರ್ನಾಟಕದಲ್ಲಿಯೂ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ ಜನವರಿ 15 ರಂದು ಸೋಮವಾರ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ.
ಸಂಕ್ರಾಂತಿ ಹಬ್ಬದ ಇತಿಹಾಸ ಮತ್ತು ಮಹತ್ವ
ಸುಗ್ಗಿಯ ಕಾಲದಲ್ಲಿ ಆಚರಿಸುವ ಹಾಗೂ ಸೂರ್ಯ ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ಪವಿತ್ರ ದಿನವನ್ನು ಮಕರ ಸಂಕ್ರಾಂತಿಯಾಗಿ ಆಚರಿಸುತ್ತೇವೆ. ಸೂರ್ಯ ತನ್ನ ಮಗ, ಮಕರ ರಾಶಿಯ ಅಧಿಪತಿ ಶನಿಯ ಮನೆಗೆ ಹೋಗುತ್ತಾನೆ ಎನ್ನುವುದು ನಂಬಿಕೆಯಿದೆ.
ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದ್ದು, ಸಂಕ್ರಾಂತಿಯು ಸಂಕರಾಸುರನೆಂಬ ದೈತ್ಯನ ವಧೆ ಮಾಡಿದ್ದಾಳೆ ಎಂಬ ಕಥೆಯಿದೆ. ಸಂಕ್ರಾಂತಿಯು ಶಂಕರಾಸುರ ಎಂಬ ರಾಕ್ಷಸನನ್ನು ಕೊಂದಿತು. ಮಕರ ಸಂಕ್ರಾಂತಿಯ ಮುಂದಿನ ದಿನವನ್ನು ಕರಿದಿನ ಅಥವಾ ಕಿಂಕ್ರಾಂತ ಎಂದು ಕರೆಯಲಾಗುತ್ತದೆ.
ಮಕರಸಂಕ್ರಾಂತಿಯ ಕಾಲದಲ್ಲಿ ತೀರ್ಥಸ್ನಾನವನ್ನು ಮಾಡುವುದರಿಂದ ಮಹಾಪುಣ್ಯವು ದೊರೆಯುವುದು. ‘ಮಕರಸಂಕ್ರಾಂತಿಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ಕಾಲವು ಪುಣ್ಯಕಾಲವಾಗಿರುತ್ತದೆ. ಸಂಕ್ರಾಂತಿ ಹಬ್ಬದಲ್ಲಿ ಬಾಗಿನ ನೀಡಿದರೆ ಬಹಳ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಮಕರ ಸಂಕ್ರಾಂತಿಯ ಸಂದರ್ಭದಲ್ಲಿ, ಗಂಗಾ ಮತ್ತು ಜಮುನಾ ಸಂಗಮದಲ್ಲಿ ಲಕ್ಷಾಂತರ ಜನರು ಪವಿತ್ರ ಸ್ನಾನ ಮಾಡುತ್ತಾರೆ. ಈ ಪವಿತ್ರ ಸ್ನಾನವು ಜನ್ಮ ಜನ್ಮಗಳ ಪಾಪಗಳನ್ನು ಕಳೆಯುತ್ತದೆ ಎನ್ನುವ ನಂಬಿಕೆಯಿದೆ. ಮಕರ ಸಂಕ್ರಾಂತಿಯ ದಿನ ಬೆಲ್ಲ, ಎಳ್ಳು ತಿನ್ನುವುದಲ್ಲದೇ, ನೀರಿನಲ್ಲಿ ಎಳ್ಳು ಸೇರಿಸಿ ಸ್ನಾನ ಮಾಡುತ್ತಾರೆ.
ಮಕರ ಸಂಕ್ರಾಂತಿಯ ಆಚರಣೆಯಲ್ಲಿ ಎಳ್ಳನ್ನು ಸೇವಿಸುವ ಸಂಪ್ರದಾಯವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ನಂಬಿಕೆಗಳಲ್ಲಿ ಆಳವಾಗಿ ಬೇರೂರಿದೆ. ಈ ಹಬ್ಬದ ಸಮಯದಲ್ಲಿ ಎಲ್ಲರಿಗೂ ಎಳ್ಳು-ಬೆಲ್ಲ ವಿತರಿಸಲಾಗುತ್ತದೆ.ಇದು ರೈತರ ಹಬ್ಬ. ಈ ದಿನದಂದು ದೇಶಾದ್ಯಂತ ರೈತರು ಉತ್ತಮ ಫಸಲು ಬರಲಿ ಎಂದು ಪೂಜಿಸುವ ಮೂಲಕ ದೇವರಲ್ಲಿ ಪ್ರಾರ್ಥಿಸುತ್ತಾರೆ.