ಈ ವರ್ಷ ಜನವರಿ 15 ರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಮಕರ ಸಂಕ್ರಾಂತಿಯನ್ನು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಆಚರಣೆ ಮಾಡುತ್ತಾರೆಯಾದ್ರೂ ಕೆಲವೊಂದು ನಂಬಿಕೆ, ಪದ್ಧತಿಗಳು ಎಲ್ಲೆಡೆ ಸಾಮಾನ್ಯವಾಗಿದೆ. ಮಕರ ಸಂಕ್ರಾಂತಿ ಹಬ್ಬದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡಿದ್ರೆ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇದಲ್ಲದೆ ಎಳ್ಳು, ಬೆಲ್ಲವನ್ನು ಹಂಚಿ ತಿನ್ನುವ ಪದ್ಧತಿ ಇದೆ. ಸಂಕ್ರಾಂತಿ ಸಂದರ್ಭದಲ್ಲಿ ಖಿಚಡಿ ತಯಾರಿಸಿ, ಸೂರ್ಯ ದೇವನಿಗೆ ಅರ್ಘ್ಯ ಅರ್ಪಿಸಿ, ದಾನ ಮಾಡುವ ರೂಢಿ ಅನೇಕ ಕಡೆ ಇದೆ.
ಸಂಕ್ರಾಂತಿ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು. ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಬಹಳ ಉತ್ತಮ. ಇದೇ ಕಾರಣಕ್ಕೆ ಅನೇಕರು ಅಯೋಧ್ಯಾ ಮಥುರಾ, ಹರಿದ್ವಾರ, ಕಾಶಿ, ಕಾಂಚೀಪುರಂ, ಉಜ್ಜಯಿನಿ, ದ್ವಾರಕಾದ ಪುಣ್ಯ ಸ್ಥಳಕ್ಕೆ ಹೋಗ್ತಾರೆ. ಆದ್ರೆ ಈ ಏಳು ಸ್ಥಳಗಳಲ್ಲಿ ಸ್ನಾನ ಮಾಡಲು ಎಲ್ಲರಿಂದಲೂ ಸಾಧ್ಯವಿಲ್ಲ. ಅಂತವರು ಮನೆಯಲ್ಲೇ ಗಂಗಾ ಸ್ನಾನ ಮಾಡಬಹುದು.
ನೀವು ಸ್ನಾನ ಮಾಡುವ ನೀರಿಗೆ ಸ್ವಲ್ಪ ಎಳ್ಳು ಮತ್ತು ಗಂಗಾಜಲವನ್ನು ಸೇರಿಸಿ ಕೈಯಿಂದ ನೀರನ್ನು ಮುಟ್ಟಿ. ನಂತ್ರ ಗಂಗಾ ಗಂಗಾ ಎಂದು ಏಳು ಬಾರಿ ಹೇಳ್ತಾ ಸ್ನಾನ ಮಾಡಬೇಕು. ಹೀಗೆ ಮಾಡಿದ್ರೆ ಗಂಗೆಯಲ್ಲಿ ಸ್ನಾನ ಮಾಡಿದಷ್ಟೇ ಪುಣ್ಯ ನಿಮಗೆ ಸಿಗುತ್ತದೆ. ಅಯೋಧ್ಯೆ ಮಥುರಾ ಮಾಯಾ, ಕಾಶೀ ಕಂಚಿ ಆವಂತಿಕಾ, ಪುರಿ ದ್ವಾರವತೀ ಚೈವ ಸಪ್ತೈತೆ ಮೋಕ್ಷದಾಯಿಕಾ ಎಂಬ ಮಂತ್ರವನ್ನು ನೀವು ಹೇಳಬಹುದು ಎನ್ನುತ್ತಾರೆ ಪಂಡಿತರು.