ಕಾಸರಗೋಡು: ಮಕರ ಜ್ಯೋತಿ ಉತ್ಸವಕ್ಕೆ ಮೊದಲು ಶಬರಿಮಲೆಯಲ್ಲಿ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಜನವರಿ 10 ರಿಂದ ಸ್ಪಾಟ್ ಬುಕಿಂಗ್ ನಿಲ್ಲಿಸಲು ಆಡಳಿತ ಮಂಡಳಿ ಸೂಚನೆ ನೀಡಿದೆ.
ಜನವರಿ 14ರಂದು ವರ್ಚುವಲ್ ಕ್ಯೂ ಬುಕಿಂಗ್ ಮಿತಿ 50,000 ಕ್ಕೆ ನಿಗದಿಪಡಿಸಲಾಗಿದೆ. ಜನವರಿ 15ರಂದು 40,000 ಮಂದಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಜನವರಿ 14, 15 ರಂದು ಶಬರಿಮಲೆಗೆ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುವ ನಿರೀಕ್ಷೆ ಇರುವುದರಿಂದ ಅಂದಿನ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಯಾತ್ರೆ ಕೈ ಬಿಡಬೇಕೆಂದು ಮನವಿ ಮಾಡಲಾಗಿದೆ. ಜನವರಿ 16 ರಿಂದ 20ರವರೆಗೆ ಹೆಚ್ಚಿನ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ಮಕರ ಜ್ಯೋತಿಗೆ ಮೂರು ದಿನ ಮೊದಲು ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೆಯ ವಿವಿಧ ಸ್ಥಳಗಳಲ್ಲಿ ತಂಗುತ್ತಾರೆ. ಮಕರ ಜ್ಯೋತಿ ಮತ್ತು ತಿರುವಾಭರಣ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯ ಭಕ್ತರು ತಂಗುವುದರಿಂದ ಮಕರ ಜ್ಯೋತಿ ವೀಕ್ಷಣೆ, ಭದ್ರತೆ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಜನವರಿ 10 ರಿಂದ ಸ್ಪಾಟ್ ಬುಕಿಂಗ್ ನಿಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.