ಬಿಸಿಲಿನ ಶಾಖಕ್ಕೆ ಕರಗಿ ವಿರೂಪಗೊಂಡಿದ್ದ ರೈಲು ಹಳಿಗಳನ್ನು ದೂರದಿಂದಲೇ ಗ್ರಹಿಸಿದ ಲೋಕೋ ಪೈಲಟ್ ಒಬ್ಬರು ಬ್ರೇಕ್ ಹಾಕಿದ ಕಾರಣ ದೊಡ್ಡದೊಂದು ದುರಂತ ಸಂಭವಿಸುವ ಸಾಧ್ಯತೆ ತಪ್ಪಿಸಿದ ಘಟನೆ ಲಖನೌನಲ್ಲಿ ಶನಿವಾರ ಜರುಗಿದೆ.
ನಗರದ ನಿಗೋಹಾನ್ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ಜರುಗಿದೆ. ಈ ಸಂದರ್ಭದಲ್ಲಿ ಹೌರಾ – ಲಖನೌ ನೀಲಾಂಚಲ್ ಎಕ್ಸ್‌ಪ್ರೆಸ್ ರೈಲು ನಿಲ್ದಾಣದ ಮೂಲಕ ಹಾದು ಹೋಗಬೇಕಿತ್ತು.
ಹಳಿಗಳು ಅಗಲೀಕರಣಗೊಂಡಿದ್ದ ಕಾರಣ ರೈಲಿಗೆ ಒಂದು ರೀತಿಯ ಹೊಡೆತ ಬೀಳುವುದನ್ನು ತಕ್ಷಣ ಗ್ರಹಿಸಿದ ಲೋಕೋ ಪೈಲಟ್ ಕೂಡಲೇ ಬ್ರೇಕ್ ಹಾಕಿದ್ದಾರೆ. ನಿಧಾನ ಗತಿಯಲ್ಲಿದ್ದ ಕಾರಣ ರೈಲು ತಕ್ಷಣ ನಿಂತಿದ್ದು, ಯಾವುದೇ ಪ್ರಯಾಣಿಕರಿಗೂ ಪ್ರಾಣಾಪಾಯ ಅಥವಾ ಗಾಯಗಳಾಗದೇ ಘಟನೆ ದುರಂತದ ಮಟ್ಟ ತಲುಪುವುದು ತಪ್ಪಿದೆ.
ಕೂಡಲೇ ಹಳಿಗಳಿಗೆ ಸೂಕ್ತ ರಿಪೇರಿಗಳನ್ನು ಮಾಡಿದ ಕಾರಣ ರೈಲು ಅಲ್ಲಿಂದ ತನ್ನ ನಿಲ್ದಾಣದತ್ತ ಹೊರಟಿದೆ. ವಿಭಾಗೀಯ ರೈಲ್ವೇ ಮ್ಯಾನೇಜರ್ (ಡಿಆರ್‌ಎಂ) ಸುರೇಶ್ ಸುಪ್ರಾ ಈ ಘಟನೆ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ.
ಹಳಿಗಳ ಕಳಪೆ ನಿರ್ವಹಣೆಯ ಕಾರಣದಿಂದ ಈ ಅಫಘಾತ ಸಂಭವಿಸಿರುವ ಶಂಕೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಉತ್ತರ ಭಾರತದಲ್ಲಿ ಬಿಸಿಲಿನ ಅಲೆಗಳು ಎಲ್ಲೆಡೆ ಜೋರಾಗಿರುವ ಕಾರಣ ರೈಲ್ವೇ ಹಳಿಗಳು ಅಧಿಕ ಪ್ರಮಾಣದಲ್ಲಿ ಶಾಖ ಹೀರಿಕೊಂಡು ಆಗಾಗ ಹಿಗ್ಗುವ ಸಾಧ್ಯತೆಗಳಿರುತ್ತವೆ. ಇಂಥ ಸಂದರ್ಭದಲ್ಲಿ, ಹೀಗೆ ಹಿಗ್ಗಿಕೊಂಡ ಹಳಿಗಳನ್ನು ಸರಿಪಡಿಸಲು ಅಲ್ಲಲ್ಲಿ ಹಳಿಗಳನ್ನು ಸ್ವಲ್ಪವೇ ಸ್ವಲ್ಪ ಕತ್ತರಿಸಲಾಗುತ್ತದೆ.