ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತೀವ್ರ ವಿರೋಧದ ನಡುವೆಯೂ ಮಹಿಷ ದಸರಾ ಆಚರಣೆಗೆ ಷರತ್ತು ಬದ್ಧ ಅನುಮತಿ ನೀಡಲಾಗಿದ್ದು, ಪೊಲೀಸರ ನಿಯಮಗಳಿಗೆ ಕ್ಯಾರೇ ಎನ್ನದೇ ಮಹಿಷ ಸಮಿತಿ ಬೈಕ್ ರ್ಯಾಲಿ, ಜಾಥ ನಡೆಸಿದೆ.
ಮಹಿಷ ದಸರಾ ಆಚರಣೆಗೆ ಷರತ್ತು ಬದ್ಧ ಅನುಮತಿ ನೀಡಿದ್ದ ಮೈಸೂರು ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ನಗರದಲ್ಲಿ ಹಾಗೂ ಚಾಮುಂಡಿ ಬೆಟ್ಟದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದರು. ಅಲ್ಲದೇ ಮಹಿಷನ ಪರ ಯಾವುದೇ ಘೋಷಣೆ ಕೂಗುವಂತಿಲ್ಲ. ಒಂದೆಡೆ 5 ಜನಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಜಾಥಾ, ಮೆರವಣಿಗೆ, ಬೈಕ್ ರ್ಯಾಲಿಗಳನ್ನು ಮಾಡುವಂತಿಲ್ಲ ಎಂದು ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದರು.
ಆದರೆ 144 ಸೆಕ್ಷನ್ ಉಲ್ಲಂಘನೆ ಮಾಡಿರುವ ಮಹಿಷ ಸಮಿತಿ, ಮೈಸೂರು ನಗರದಲ್ಲಿ ಬೈಕ್ ರ್ಯಾಲಿ ನಡೆಸಿದೆ. ಮಹಿಷನ ಪರ ಘೋಷಣೆಗಳನ್ನು ಕೂಗಿದೆ. ಪುರಭವನದ ಬಳಿ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಕೂಡ ಅಚ್ಚರಿಗೆ ಕಾರಣವಾಗಿದೆ.
ಪೊಲೀಸ್ ಕಣ್ಗಾವಲಿನ ನಡುವೆಯೂ ನಿಯಮಗಳನ್ನು ಗಾಳಿಗೆ ತೂರಿ ಮಹಿಷ ಸಮಿತಿ ಸದಸ್ಯರು ಬೈಕ್ ಜಾಥಾ ನಡೆಸಿ ಮಹಿಷನ ಪರ ಜೈಕಾರ ಹಾಕುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.