ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ ತನ್ನ ಬಹು ನಿರೀಕ್ಷಿತ ಹೊಸ ಶ್ರೇಣಿಯ ಎಸ್‌ಯುವಿಯನ್ನು ಜೂನ್ 27ರಂದು ಬಿಡುಗಡೆ ಮಾಡುತ್ತಿದೆ.
ಪ್ರಸ್ತುತ ಸ್ಕಾರ್ಪಿಯೊವನ್ನು ಭಾರತೀಯ ಮಾರುಕಟ್ಟೆಯಲ್ಲಿ ‘ಸ್ಕಾರ್ಪಿಯೋ ಕ್ಲಾಸಿಕ್’ ಎಂದು ಮಾರಾಟ ಮಾಡುವುದನ್ನು ಮುಂದುವರಿಸಲಾಗುತ್ತದೆ.
ಹೊಸ ಸ್ಕಾರ್ಪಿಯೋ-ಎನ್ ಅನ್ನು ಕಂಪನಿಯ ಅತ್ಯಾಧುನಿಕ ಸೌಲಭ್ಯ ಹೊಂದಿದ ವ್ಯವಸ್ಥೆಯಲ್ಲಿ ತಯಾರಿಸಲಾಗುತ್ತಿದೆ. ಕಂಪನಿಯ ಪ್ರಕಾರ, ಫುಲ್ ಸೈಜ್ ಎಸ್‌ಯುವಿಗಾಗಿ ಎದುರು ನೋಡುತ್ತಿರುವ ಟೆಕ್ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಮಾಡಲ್ಪಟ್ಟಿದೆ.
ಹೊಸ ಸ್ಕಾರ್ಪಿಯೊ ಪ್ರೀಮಿಯಂ ಇಂಟೀರಿಯರ್‌ಗಳು ಮತ್ತು ಆಧುನಿಕ ವೈಶಿಷ್ಟ್ಯಗಳು ಮತ್ತು ಇತ್ತೀಚಿನ ತಂತ್ರಜ್ಞಾನದೊಂದಿಗೆ ಬರಲಿದೆ. ಇದು ಗ್ಯಾಸೋಲಿನ್ ಮತ್ತು ಡೀಸೆಲ್ ಎಂಜಿನ್‌ಗಳಿಂದ ಚಾಲಿತವಾಗಲಿದ್ದು, ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳ ಆಯ್ಕೆಗಳಿರಲಿವೆ.
ಇದನ್ನು 4×4 ಆಯ್ಕೆಯೊಂದಿಗೆ ನೀಡಲಾಗುವುದು. ಹಾಗೆಯೇ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆಯುವ ನಿರೀಕ್ಷೆಯಿದೆ.
ವಿನ್ಯಾಸದ ವಿಷಯಕ್ಕೆ ಬರುವುದಾದರೆ, ವರ್ಟಿಕಲ್ ಸ್ಲ್ಯಾಟ್ ಗ್ರಿಲ್, ಅದರ ಮಧ್ಯದಲ್ಲಿ ಹೊಸ ಮಹೀಂದ್ರಾ ಲೋಗೋ ಕಾಣಿಸುತ್ತದೆ. ಇದು ಇತರ ನವೀಕರಣಗಳ ಜೊತೆಗೆ ಫಾಗ್ ಲ್ಯಾಂಪ್, ಸಿ- ಆಕಾರದ ಎಲ್ ಇಡಿ ಡಿ ಆರ್ ಎಲ್ ಗಳನ್ನು ಸಹ ಪಡೆಯುತ್ತದೆ. ಡಬಲ್- ಬ್ಯಾರೆಲ್ ಹೆಡ್‌ಲೈಟ್ ಸಹ ಇರಲಿದೆ.
ಸ್ಕಾರ್ಪಿಯೋ ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಐಕಾನಿಕ್ ಬ್ರ್ಯಾಂಡ್ ಆಗಿದೆ. ಆಲ್- ನ್ಯೂ ಸ್ಕಾರ್ಪಿಯೊ- ಎನ್ ಭಾರತದಲ್ಲಿ ಎಸ್ ಯುವಿ ವಿಭಾಗದಲ್ಲಿ ಬೆಂಚ್‌ಮಾರ್ಕ್ ಮರುಸೃಷ್ಟಿಸುವ ನಿರೀಕ್ಷೆಯಿದೆ ಎಂದು ಕಂಪನಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಈ ಅತ್ಯಾಧುನಿಕ ಎಸ್ ಯು ವಿ ಯನ್ನು ನಮ್ಮ ಯುವ, ಉತ್ಸಾಹಿ ತಂಡ ಚೆನ್ನೈ ಬಳಿಯ ಮಹೀಂದ್ರಾ ರಿಸರ್ಚ್ ವ್ಯಾಲಿ, ಯು ಎಸ್ ಎನಲ್ಲಿರುವ ಮಹೀಂದ್ರಾ ನಾರ್ತ್ ಅಮೇರಿಕನ್ ಟೆಕ್ನಿಕಲ್ ಸೆಂಟರ್, ಮುಂಬೈನ ಮಹೀಂದ್ರಾ ಡಿಸೈನ್ ಸ್ಟುಡಿಯೋದಲ್ಲಿ ವಿನ್ಯಾಸಗೊಳಿಸಿವೆ ಎಂದು ಹೇಳಿದ್ದಾರೆ.