ಮಹಿಂದ್ರಾ ಥಾರ್ ಭಾರತದ ಎಸ್ ಯು ವಿ ಗಳ ಪೈಕಿ ಮುಂಚೂಣಿ ವಾಹನವಾಗಿದೆ. ಅದರ ಗಟ್ಟಿಮುಟ್ಟಾದ ವಿನ್ಯಾಸದ ಕಾರಣಕ್ಕೆ ಎಲ್ಲರೂ ಅದನ್ನು ಮೆಚ್ಚಿಕೊಳ್ಳುತ್ತಾರೆ. ಮತ್ತೊಂದು ಬದಿಗೆ ಟಾಟಾ ನ್ಯಾನೋ ಅತಿ ಸಣ್ಣ ಕಾರ್ ಆಗಿದೆ. ಬೆಲೆ ಕಾರಣಕ್ಕೆ ಇದು ಒಂದು ಕಾಲದಲ್ಲಿ ಮಧ್ಯಮ ವರ್ಗದವರ ನೆಚ್ಚಿನ ವಾಹನವಾಗಿತ್ತು.
ಇವೆರಡೂ ವಾಹನಗಳ ನಡುವೆ ಅಪಘಾತ ಸಂಭವಿಸಿದರೆ ಸಹಜವಾಗಿ ಟಾಟಾ ನ್ಯಾನೋ ಹೆಚ್ಚು ಜಖಂಗೊಳ್ಳುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಛತ್ತೀಸ್ಗಡದ ದುರ್ಗ್ ಜಿಲ್ಲೆಯಲ್ಲಿ ನಡೆದ ಅಪಘಾತ ಬೇರೆಯದ್ದೆ ಕಥೆಯನ್ನು ಹೇಳುತ್ತಿದೆ.
ಮಹೀಂದ್ರಾ ಥಾರ್ ವಾಹನಕ್ಕೆ ಟಾಟಾ ನ್ಯಾನೋ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಮಹೀಂದ್ರಾ ಥಾರ್ ಪಲ್ಟಿಯಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ನೆಟ್ಟಿಗರ ನಡುವೆ ದೊಡ್ಡ ಚರ್ಚೆಯೇ ನಡೆದಿದೆ.
ಕೆಲವರು ಈ ಅಪಘಾತಕ್ಕೆ ಆನೆ ಮತ್ತು ಇರುವೆ ಉದಾಹರಣೆ ಕೊಟ್ಟರೆ, ಮತ್ತೊಬ್ಬರು ಎರಡೂ ಸಹ ಭಾರತದಲ್ಲಿ ತಯಾರಾದ ವಾಹನಗಳು ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಆದರೆ ಮಹೀಂದ್ರಾ ಥಾರ್ ಪಲ್ಟಿಯಾಗಲು ಟಾಟಾ ನ್ಯಾನೋ ನೇರವಾಗಿ ಅದರ ಮಧ್ಯಭಾಗಕ್ಕೆ ಡಿಕ್ಕಿ ಹೊಡೆದಿದ್ದು ಕಾರಣ ಎಂದು ಹೇಳಲಾಗುತ್ತಿದೆ.