
ಬೆಂಗಳೂರು: ಮಂಡ್ಯದಲ್ಲಿ ಜೂನ್ 7, 8, 9 ರಂದು ನಡೆಯಬೇಕಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮತ್ತೆ ಮುಂದೂಡಲಾಗಿದೆ.
ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಈ ಬಗ್ಗೆ ಮಾಹಿತಿ ನೀಡಿದ್ದು, ಲೋಕಸಭೆ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾದರೂ ಸಮ್ಮೇಳನದ ವೇಳೆಗೆ ನೀತಿ ಸಂಹಿತೆ ರದ್ದಾಗಿರುವುದಿಲ್ಲ. ಹೀಗಾಗಿ ಪೂರ್ವ ತಯಾರಿ ಮಾಡಿಕೊಳ್ಳಲು ಆಗುವುದಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಜೂನ್ ನಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣೆ ಕೂಡ ನಿಗದಿಯಾಗಿರುವುದರಿಂದ ಮತ್ತು ಮಳೆಗಾಲ ಆರಂಭವಾಗುವುದರಿಂದ ಸಮ್ಮೇಳನವನ್ನು ನವೆಂಬರ್, ಡಿಸೆಂಬರ್ ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಜೂನ್ ನಲ್ಲಿ ಮುಂದಿನ ದಿನಾಂಕ ನಿಗದಿಪಡಿಸಲಾಗುವುದು ಎಂದು ಹೇಳಿದ್ದಾರೆ.