ನವದೆಹಲಿ: ಭಾರತದ ಹೊಸ ಯುದ್ಧನೌಕೆ ಮಹೇಂದ್ರಗಿರಿಯನ್ನು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ಲೋಕಾರ್ಪಣೆ ಮಾಡಲಾಗುವುದು.
ಮುಂಬೈನ ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್‌ನಲ್ಲಿ ನಿರ್ಮಿಸಲಾದ ಯುದ್ಧನೌಕೆ ‘ಮಹೇಂದ್ರಗಿರಿ’ ಶುಕ್ರವಾರ (1 ಸೆಪ್ಟೆಂಬರ್ 2023) ರಂದು ಉದ್ಘಾಟನೆಗೊಳ್ಳಲಿದೆ. ಉಪರಾಷ್ಟ್ರಪತಿ ಜಗದೀಪ್ ಧನ್ ಖರ್ ಅವರ ಪತ್ನಿ ಡಾ.ಸುದೇಶ್ ಧಂಖರ್ ಅವರು ಯುದ್ಧನೌಕೆಗೆ ಚಾಲನೆ ನೀಡಲಿದ್ದಾರೆ. ಸಮಾರಂಭದಲ್ಲಿ ಉಪರಾಷ್ಟ್ರಪತಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮಹೇಂದ್ರಗಿರಿಯು ತಾಂತ್ರಿಕವಾಗಿ ಮುಂದುವರಿದ ಯುದ್ಧನೌಕೆಯಾಗಿದೆ. ನೌಕಾಪಡೆಯ ಸಾಮರ್ಥ್ಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಮಹೇಂದ್ರಗಿರಿಯು ಪ್ರಾಜೆಕ್ಟ್ 17A ಯ 7ನೇ ಮತ್ತು ಕೊನೆಯ ಸ್ಟೆಲ್ತ್ ಫ್ರಿಗೇಟ್ ಆಗಿದೆ. 4 ಯುದ್ಧನೌಕೆಗಳನ್ನು ಮಜಗಾನ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್‌ನಲ್ಲಿ ನಿರ್ಮಿಸಲಾಗುತ್ತಿದೆ. ಉಳಿದವುಗಳನ್ನು ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಇಂಜಿನಿಯರ್ಸ್(GRSE) ಯೋಜನೆಯಡಿಯಲ್ಲಿ ನಿರ್ಮಿಸಲಾಗುತ್ತಿದೆ.
ಮಹೇಂದ್ರಗಿರಿಯ ಉಡಾವಣೆಯು ಸ್ವಾವಲಂಬಿ ನೌಕಾ ಪಡೆಯನ್ನು ನಿರ್ಮಿಸುವಲ್ಲಿ ನಮ್ಮ ರಾಷ್ಟ್ರವು ಸಾಧಿಸಿದ ಅದ್ಭುತ ಪ್ರಗತಿಗೆ ಸೂಕ್ತವಾದ ಸಾಕ್ಷಿಯಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಸ್ಟ್ 17 ರಂದು GRSE ನಲ್ಲಿ ಪ್ರಾಜೆಕ್ಟ್ 17A ನ ಆರನೇ ಯುದ್ಧನೌಕೆ ವಿಂಧ್ಯಗಿರಿ ಉದ್ಘಾಟಿಸಿದ್ದರು.