alex Certify ಸರ್ಕಾರದ ಗ್ಯಾರಂಟಿ ಯೋಜನೆಗಳ ಹಿಂದೆ ಮಹಾತ್ಮ ಗಾಂಧೀಜಿಯವರ ಚಿಂತನೆಗಳಿವೆ : ಸಿಎಂ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರದ ಗ್ಯಾರಂಟಿ ಯೋಜನೆಗಳ ಹಿಂದೆ ಮಹಾತ್ಮ ಗಾಂಧೀಜಿಯವರ ಚಿಂತನೆಗಳಿವೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಹಿಂದೆ ಮಹಾತ್ಮ ಗಾಂಧೀಜಿಯವರ ಚಿಂತನೆಗಳಿವೆ ಎನ್ನುವುದನ್ನು ನಾನು ಹೆಮ್ಮೆಯಿಂದ ಹೇಳಬಯಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಗಾಂಧಿ ಸ್ಮಾರಕ ನಿಧಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆ, ಸಂಸ್ಥೆಗಳ ಸಹಯೋಗದಲ್ಲಿ ನಡೆದ ಮಹತ್ಮಾ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಡೀ ದೇಶವೇ ರಾಷ್ಟ್ರಪಿತ ಎಂದು ಒಮ್ಮತದಿಂದ ಒಪ್ಪಿಕೊಂಡಿರುವ ಮಹಾತ್ಮ ಗಾಂಧೀಜಿ ಎಂಬ ಮಹಾಚೇತನ ಸತ್ಯ ಶಾಂತಿ, ಅಹಿಂಸೆಗಳ ಸಾಕಾರಮೂರ್ತಿ. ಅಕ್ಟೋಬರ್ 2 ರಂದು ಅವರ ಜನ್ಮ ದಿನಾಚರಣೆ ಆಚರಿಸುತ್ತಿರುವ ಈ ಸುಸಂದರ್ಭದಲ್ಲಿ ನಾನು ನಾಡಿನ ಜನತೆಗೆ ಜಯಂತಿಯ ಶುಭಾಶಯಗಳನ್ನು ಕೋರುತ್ತೇನೆ.

ಗಾಂಧೀಜಿ ಅವರ ಚಿಂತನೆಯ ಬೆಳಕಲ್ಲಿಯೇ ನಾವೆಲ್ಲರೂ ಇಂದು ಹೆಮ್ಮೆಪಡುವ ಸ್ವತಂತ್ರ ಭಾರತ ನಿರ್ಮಾಣ ಗೊಂಡಿದೆ. ಭಾರತೀಯ ಸಮಾಜದ ಸ್ಥಿತಿಗತಿಗಳನ್ನು ಸಂಪೂರ್ಣವಾಗಿ ಅರಿತಿದ್ದ ಗಾಂಧೀಜಿ ಅವರು ಉತ್ತಮ ರಾಷ್ಟ್ರ ನಿರ್ಮಾಣಕ್ಕಾಗಿ ಹತ್ತು ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿದ್ದರು.

ಅಸ್ಪøಶ್ಯತಾ ನಿವಾರಣೆ, ರೈತರ ಏಳಿಗೆ ಖಾದಿ ಮತ್ತು ಗ್ರಾಮೋದ್ಯೋಗ, ಕಾರ್ಮಿಕರ ಕಲ್ಯಾಣ, ಮಹಿಳೆಯರಿಗೆ ರಕ್ಷಣೆ , ಮೂಲ ಶಿಕ್ಷಣ, ಗ್ರಾಮಸ್ವಚ್ಛತೆ, ಆರ್ಥಿಕ ಸಮಾನತೆ, ಸಮುದಾಯದ ಐಕ್ಯತೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಸಾರ್ವಜನಿಕ ಆರೋಗ್ಯ ಹಾಗೂ ಶಿಕ್ಷಣ ಅವರ ರಚನಾತ್ಮಕ ಕಾರ್ಯಕ್ರಮಗಳು. ಈ ಚಿಂತನೆ ಗಾಂಧೀ ವಿಚಾರಧಾರೆಯಲ್ಲಿ ನಂಬಿಕೆಯಿಟ್ಟಿರುವ ನಮ್ಮ ಸರ್ಕಾರದ ಮಾರ್ಗದರ್ಶಿ ಸೂತ್ರಗಳೂ ಆಗಿವೆ. ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಹಿಂದೆ ಮಹಾತ್ಮ ಗಾಂಧೀಜಿಯವರ ಚಿಂತನೆಗಳಿವೆ ಎಂದರು.

‘’ಹಸಿದವನಿಗೆ ಭಗವಂತನು ಕೇವಲ ರೊಟ್ಟಿ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ, ಬಡವರಿಗೆ ಆರ್ಥಿಕತೆಯೇ ಆಧ್ಯಾತ್ಮಿಕತೆ’’ ಎಂದು ಗಾಂಧೀಜಿ ಹೇಳಿದ್ದರು. ಕರ್ನಾಟಕ ಸರ್ಕಾರದ ಚಿಂತನೆ ಕೂಡ ಇದೇ ಆಗಿದೆ. ಕಡು ಬಡವರು ಅನ್ನಕ್ಕಾಗಿ ಯಾರ ಬಳಿಯೂ ಕೈ ಚಾಚದೆ ಸ್ವಾಭಿಮಾನದಿಂದ ಬದುಕುಬೇಕು ಎಂಬ ಆಶಯವೇ ಅನ್ನಭಾಗ್ಯ ಯೋಜನೆಯ ಮೂಲ ಉದ್ದೇಶ. ಈ ಯೋಜನೆಯಡಿ ನೀಡಲಾಗುತ್ತಿದ್ದ ಐದು ಕಿಲೋ ಅಕ್ಕಿಯನ್ನು ಹತ್ತು ಕಿಲೋಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಮಹಿಳೆಯರಿಗೆ ಸಮಾನ ಅವಕಾಶ ನೀಡಿ ಅವರನ್ನು ಜೊತೆಯಲ್ಲಿ ಕರೆದೊಯ್ಯಬೇಕು ಎಂದು ಗಾಂಧೀಜಿ ಬಯಸಿದ್ದರು.  ನಮ್ಮ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಗ್ಯಾರಂಟಿ ಯೋಜನೆಗಳಲ್ಲಿ ಪ್ರತ್ಯಕ್ಷವಾಗಿ ಎರಡು ಯೋಜನೆಗಳು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಮನೆಯೊಡತಿಗೆ ಪ್ರತಿತಿಂಗಳು ನೀಡುವ ಎರಡು ಸಾವಿರ ರೂಪಾಯಿಗಳ ಮಾಸಾಶನ ಮಹಿಳಾ ಸಬಲೀಕರಣದ ಉದ್ದೇಶ ಹೊಂದಿವೆ ಎಂದು ತಿಳಿಸಿದರು.

ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡಾ 35 ರಷ್ಟು ಮೀಸಲಾತಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡಾ 50 ರಷ್ಟು ರಾಜಕೀಯ ಮೀಸಲಾತಿ ಕಲ್ಪಿಸಿದ್ದು ಕೂಡಾ ನಮ್ಮದೇ ಸರ್ಕಾರ ಎನ್ನುವುದನ್ನು ನೆನಪಿಸಬಯಸುತ್ತೇನೆ. ಲೋಕಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮಸೂದೆ ಕೂಡಾ ಕಾಂಗ್ರೆಸ್ ಪಕ್ಷದ ಚಿಂತನೆಯ ಕೂಸು ಆಗಿದೆ. ಮಹಿಳಾ ಮೀಸಲಾತಿಗೆ ನಾವು ಪ್ರಾಮಾಣೀಕವಾಗಿ ಬದ್ದರಾಗಿದ್ದೇವೆ.

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯಿಂದಾಗಿ ಕರ್ನಾಟಕದಲ್ಲಿ ಮಹಿಳೆಯರು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹೆಚ್ಚಿನ ಪ್ರಾತಿನಿದ್ಯ ಪಡೆದು ಅಭಿವೃದ್ಧಿ ಪಥದಲ್ಲಿ ಪುರುಷರ ಜೊತೆ ಜೊತೆಗೆ ಹೆಜ್ಜೆ ಹಾಕುವಂತಾಗಿದೆ. ಅಲಕ್ಷಿತರಾಗಿದ್ದ ಮಹಿಳೆಯರನ್ನು ಸಂಘಟಿಸಿ ಅವರಿಗೆ ಆರ್ಥಿಕ ಚೈತನ್ಯ ತುಂಬಲು ಕರ್ನಾಟಕದಲ್ಲಿ ಆರಂಭಿಸಿದ ‘ಸ್ತ್ರೀ ಶಕ್ತಿ’ ಯೋಜನೆ ಈಗ ಒಂದು ಬೃಹತ್ ಆಂದೋಲನವಾಗಿ ಬೆಳೆದು ನಿಂತಿದೆ.

ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಲು ಹೆಣ್ಣು ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಸ್ವಯಂ ಉದ್ಯೋಗ ಯೋಜನೆಯಡಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಚಿಕಿತ್ಸೆ, ಕಾನೂನು ನೆರವು ಮತ್ತು ಪೊಲೀಸ್ ರಕ್ಷಣೆ ನೀಡಲು ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ “ಮಹಿಳಾ ಚಿಕಿತ್ಸಾ” ಘಟಕಗಳನ್ನು ತೆರೆಯಲಾಗಿದೆ. ಒಟ್ಟಾರೆಯಾಗಿ ಗಾಂಧೀಜಿಯವರ ಆಶಯದಂತೆ ಮಹಿಳೆಯರನ್ನು ವಿಶೇಷ ಕಾಳಜಿಯಿಂದ ಕರ್ನಾಟಕ ನೋಡಿಕೊಳ್ಳುತ್ತಿದೆ.

ಗಾಂಧೀಜಿಯವರು ಗ್ರಾಮಮಟ್ಟದ ಆಡಳಿತ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಿ ಅವು ಸ್ವಾವಲಂಬಿ, ಸ್ವಾಭಿಮಾನಿ ಘಟಕಗಳಾಗುವಂತೆ ಮಾಡಬೇಕು ಎಂದು ಕನಸು ಕಂಡಿದ್ದರು. ಗಾಂಧೀಜಿ ಅವರ ಗ್ರಾಮಾಭಿವೃದ್ಧಿಯ ಕನಸುಗಳನ್ನು ನನಸು ಮಾಡಲು ನಾವು ಕಂಕಣ ಬದ್ಧರಾಗಿದ್ದೇವೆ. ಗ್ರಾಮಗಳ ವಿಕಾಸಕ್ಕಾಗಿ ನಮ್ಮ ಹಿಂದಿನ ಸರ್ಕಾರ 21 ಅಂಶಗಳ ಹೊಸ ಕಾರ್ಯಕ್ರಮಗಳನ್ನು ರೂಪಿಸಿತ್ತು ಅವುಗಳು ಮುಂದುವರಿದಿವೆ. ಗ್ರಾಮ ನೈರ್ಮಲ್ಯ ಗಾಂಧೀಜಿಯವರ ಅಚ್ಚುಮೆಚ್ಚಿನ ಕಾಯಕವಾಗಿತ್ತು. ಗ್ರಾಮ ನೈರ್ಮಲ್ಯದ ವಿಷಯದಲ್ಲಿ ಕರ್ನಾಟಕವು ಗಾಂಧೀಜಿಯವರ ಹಾದಿಯಲ್ಲೇ ನಡೆಯುತ್ತಿದ್ದು ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ.

ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣದಲ್ಲಿ ಕರ್ನಾಟಕ ರಾಜ್ಯವು ಇಡೀ ರಾಷ್ಟ್ರದಲ್ಲಿಯೇ ಪ್ರಥಮ ಸ್ಥಾನ ಪಡೆದು ದಾಖಲೆ ನಿರ್ಮಿಸಿತ್ತು. ಸ್ನಾನಗೃಹ ಮತ್ತು ಶೌಚಾಲಯಗಳೆರಡನ್ನೂ ‘’ಗ್ರಾಮೀಣ ಗೌರವ’’ ಕಾರ್ಯಕ್ರಮದಲ್ಲಿ ಒಟ್ಟಿಗೇ ನಿರ್ಮಿಸುವ ಹೊಸ ಪರಿಕಲ್ಪನೆಯನ್ನು ನಾವು ರಾಷ್ಟ್ರಕ್ಕೆ ನೀಡಿದ್ದೇವೆ. ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಕೂಡ ಕರ್ನಾಟಕ ರಾಷ್ಟ್ರದ ಗಮನ ಸೆಳೆದಿದೆ. ಅತ್ಯುತ್ತಮ ಗುಣಮಟ್ಟದ ಕುಡಿಯುವ ನೀರನ್ನು ಅತ್ಯಲ್ಪ ದರದಲ್ಲಿ ಗ್ರಾಮೀಣ ಜನರಿಗೆ ಒದಗಿಸುತ್ತಿರುವ ಕರ್ನಾಟಕದ ಹೊಸ ಪ್ರಯೋಗದ ಬಗ್ಗೆ ರಾಷ್ಟ್ರಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

ಮಹಾತ್ಮ ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿರುವ ‘ಅಸ್ಪೃಶ್ಯತಾ ನಿವಾರಣೆ’ ಕಾರ್ಯಕ್ರಮ ಕರ್ನಾಟಕದಲ್ಲಿ ಬಹಳ ಹಿಂದಿನಿಂದಲೇ ಜಾರಿಯಲ್ಲಿದೆ. ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟದಲ್ಲಿ ಕರ್ನಾಟಕಕ್ಕೆ ದೀರ್ಘ ಪರಂಪರೆಯಿದೆ.

ಬಸವಣ್ಣನವರಿಂದ ಹಿಡಿದು ನಾಲ್ವಡಿ ಕೃಷ್ಣರಾಜ ಒಡೆಯರ್, ದೇವರಾಜ ಅರಸುವರೆಗೆ ಹಲವಾರು ಮಹನೀಯರು ಜಾತಿ ಪದ್ದತಿಯ ವಿರುದ್ಧ ಹೋರಾಡಿ ಕರ್ನಾಟಕಕ್ಕೆ ಘನತೆ ತಂದುಕೊಟ್ಟಿದ್ದಾರೆ. ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿರುವ ನಮ್ಮ ಸರ್ಕಾರ ಕೂಡ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ ಎಂದು ತಿಳಿಸಲು ನನಗೆ ಹೆಮ್ಮೆ ಎನಿಸುತ್ತಿದೆ.

ಅಸ್ಪೃಶ್ಯತೆ ಎನ್ನುವುದು ಕೇವಲ ಕಾನೂನಿನ ಮೂಲಕ ನಿವಾರಣೆಯಾಗುವಂತಹ ಪಿಡುಗಲ್ಲ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಅಸ್ಪøಶ್ಯ ಸಮುದಾಯವನ್ನು ಶೈಕ್ಷಣಿಕವಾಗಿ ಸದೃಢರನ್ನಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ಕೂಡಾ ಅಗತ್ಯ. ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಒಳಿತನ್ನೇ ಕೇಂದ್ರೀಕರಿಸಿ ಆಡಳಿತ ನಡೆಸುತ್ತಿದೆ.

ಈ ಸಮುದಾಯದ ನೊಂದ ಜನರಿಗಾಗಿ ಮೀಸಲಿಟ್ಟಿರುವ ಅನುದಾನವು ಸಂಪೂರ್ಣವಾಗಿ ಆಯಾ ವರ್ಷದಲ್ಲಿಯೇ ವಿನಿಯೋಗವಾಗಬೇಕು ಎಂದು ವಿಶೇಷ ಕಾಯಿದೆಯನ್ನೇ ನಾವು ಜಾರಿಗೆ ತಂದಿದ್ದೇವೆ. ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾಯಿದೆಯಡಿ ಯೋಜನಾ ಗಾತ್ರದ ಶೇಕಡಾ 24 ರಷ್ಟು ಹಣವನ್ನು ಏಕ ಗವಾಕ್ಷಿಯ ಮೂಲಕ ಈ ಜನಾಂಗಗಳ ಕಲ್ಯಾಣಕ್ಕಾಗಿ ವೆಚ್ಚ ಮಾಡುತ್ತಿದ್ದೇವೆ.

ಗಾಂಧೀಜಿಯವರಿಗೆ ಎಳೆಯ ಮಕ್ಕಳ ಬಗ್ಗೆ ವಿಶೇಷ ಮಮತೆ. ವಿದ್ಯಾರ್ಥಿಗಳನ್ನು ಕುರಿತು ಅವರು, ಬೆಳೆಯುವ ಪೈರನ್ನು ಮೊಳಕೆಯಲ್ಲಿಯೇ ಪೋಷಿಸಿ ಸಂರಕ್ಷಿಸಬೇಕು ಎಂದು ಹೇಳುತ್ತಿದ್ದರು. ಗಾಂಧೀಜಿಯವರ ಈ ಕರೆಯನ್ನು ಕರ್ನಾಟಕವು ಅಕ್ಷರಶಃ ಅನುಷ್ಠಾನಗೊಳಿಸುತ್ತಿದೆ. ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟವನ್ನು ಒದಗಿಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿ ಒಂದರಿಂದ ಹತ್ತನೇ ತರಗತಿಯಲ್ಲಿ ಮತ್ತು ಕಲಿಯುತ್ತಿರುವ ಒಂದು ಕೋಟಿಗೂ ಹೆಚ್ಚು ಶಾಲಾಮಕ್ಕಳಿಗೆ ವಾರದಲ್ಲಿ ಮೂರು ದಿನ ಉಚಿತವಾಗಿ ಬಿಸಿಹಾಲು ನೀಡಿ ಮಕ್ಕಳಲ್ಲಿನ ಪೌಷ್ಠಿಕತಾ ಪ್ರಮಾಣವನ್ನು ವೃದ್ಧಿಸಲಾಗುತ್ತಿದೆ.

ಕೋಮು ಸೌಹಾರ್ದತೆ ಗಾಂಧೀಜಿಯವರ ಹೃದಯಕ್ಕೆ ಅತ್ಯಂತ ಸಮೀಪವಾಗಿತ್ತು. ತಮ್ಮ ಜೀವನದುದ್ದಕ್ಕೂ ಹಿಂದೂ–ಮುಸ್ಲಿಮ್ ಏಕತೆಗಾಗಿ ಅವರು ಹೋರಾಡಿದವರು. ಈ ಕಾರಣಕ್ಕಾಗಿಯೇ ಅವರು ದುರುಳನೊಬ್ಬನ ಗುಂಡೇಟಿನಿಂದ ಪ್ರಾಣ ಕಳೆದು ಕೊಳ್ಳಬೇಕಾಯಿತು. ಕೋಮು ದ್ವೇಷದ ಹೆಡೆ ಮತ್ತೆ ಬಿಚ್ಚಲಾರಂಭಿಸಿರುವ ಇಂದಿನ ದಿನಗಳಲ್ಲಿ ಗಾಂಧೀಜಿ ಚಿಂತನೆ ನಮ್ಮ ಒಳಗಣ್ಣು ತೆರೆಸಬೇಕು. ಸರ್ವ ಧರ್ಮದ ಭಾವಬಂಧ ಬೆಳೆಸಲು ಅವರ ಚಿಂತನೆ ನಮಗೆ ನೆರವಾಗಬೇಕು. ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದೇ ಅವರಿಗೆ ನಾವು ಅರ್ಪಿಸುವ ನಿಜವಾದ ಶ್ರದ್ಧಾಂಜಲಿ ಎನ್ನುವುದನ್ನು ನಾವು ಮರೆಯಬಾರದು.

ನಮ್ಮ ಸಮಾಜದಲ್ಲಿ ಆರ್ಥಿಕ ಸಮಾನತೆ ತರಬೇಕು ಎನ್ನುವುದು ಗಾಂಧೀಜಿ ಅವರ ಆಶಯವಾಗಿತ್ತು. ಆರ್ಥಿಕ ಸಮಾನತೆ ತರುವ ದಿಕ್ಕಿನಲ್ಲಿ ಕರ್ನಾಟಕವು ದೇಶದಲ್ಲಿಯೇ ಪ್ರಥಮ ಎನ್ನಬಹುದಾದ ಹೆಜ್ಜೆಯನ್ನಿಟ್ಟಿದೆ. ರಾಜ್ಯದಲ್ಲಿರುವ ಪ್ರತಿಯೊಂದು ಕುಟುಂಬದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಾವು ಈಗಾಗಲೇ ನಡೆಸಿದ್ದೇವೆ. ಈ ಸಮೀಕ್ಷೆಯಿಂದ ದೊರೆಯುವ ಮಾಹಿತಿಯನ್ನು ಆಧರಿಸಿ ಹಿಂದುಳಿದ ಜನ ಸಮುದಾಯಗಳ ಆರ್ಥಿಕ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ನಾವು ರೂಪಿಸಲಿದ್ದೆವೆ. ರಾಜ್ಯದಲ್ಲಿ ಆರ್ಥಿಕ ಸಮಾನತೆ ತರುವ ದಿಕ್ಕಿನಲ್ಲಿ ಇದು ನಮ್ಮ ದಿಟ್ಟ ನಡೆಯಾಗಿದೆ.

ಮಹಾತ್ಮ ಗಾಂಧೀಜಿಯವರ ಸಾಮಾಜಿಕ ಕಾಳಜಿಯ ಒಂದು ಉದಾಹರಣೆಯೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ. ಮಹಾತ್ಮ ಗಾಂಧೀಜಿಯವರು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಮೂರು ಕಿವಿ ಮಾತುಗಳನ್ನು ಹೇಳಿದ್ದರು.

ಹಳ್ಳಿಗಳನ್ನು ಮರೆಯಬೇಡಿ, ಖಾದಿಯನ್ನು ಕೈ ಬಿಡಬೇಡಿ, ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳಿ ಎಂಬುದು ಗಾಂಧೀಜಿ ಅವರ ಹಿತ ನುಡಿಗಳಾಗಿದ್ದವು. ಪ್ರಧಾನಿ ನೆಹರೂ ಅವರು ಈ ಮೂರೂ ಮಾತುಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿ ಕೊಂಡಿದ್ದರು.

ಗ್ರಾಮೀಣಾಭಿವೃದ್ಧಿ ನೆಹರೂ ಅವರ ನೆಚ್ಚಿನ ಆದ್ಯತಾ ವಲಯವಾಗಿತ್ತು. ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ಗಾಂಧೀಜಿ ಅವರು ಹೆಚ್ಚಿನ ಪ್ರೋತ್ಸಾಹ ನೀಡಿ ಕೈಹಿಡಿದಿದ್ದರು. ಕೋಮು ಸೌಹಾರ್ದತೆಯನ್ನು ಕಾಪಾಡಲು ನೆಹರೂ ಅವರು ಸದಾ ಕಾಳಜಿ ವಹಿಸುತ್ತಿದ್ದರು. ನಮ್ಮ ಸರ್ಕಾರ ಕೂಡ ಅದೇ ಹಾದಿಯಲ್ಲಿ ಮುನ್ನಡೆಯುತ್ತಿದೆ. ಗಾಂಧೀಜಿಯವರ ಹಿತನುಡಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವರ ಕನಸುಗಳನ್ನು ನನಸು ಮಾಡಲು ಸದಾ ಶ್ರಮಿಸುತ್ತದೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...