ವಾಷಿಂಗ್ಟನ್: ನ್ಯೂಯಾರ್ಕ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ ಘಟನೆಯನ್ನು ಭಾರತೀಯ-ಅಮೆರಿಕನ್ ಸಮುದಾಯದ ಮುಖಂಡರು ಖಂಡಿಸಿದ್ದಾರೆ. ಇದು ಇಬ್ಬರು ಮಹಾನ್ ನಾಯಕರಾದ ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಗೆ ಅಗೌರವವಾಗಿದೆ ಎಂದು ಹೇಳಿದ್ದಾರೆ.
ನ್ಯೂಯಾರ್ಕ್ ನಗರದಲ್ಲಿ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದ್ದು, ಭಾರತದ ಕಾನ್ಸುಲೇಟ್ ಜನರಲ್ ಇದೊಂದು ‘ಹೇಯ ಕೃತ್ಯ’ ಎಂದು ತೀವ್ರವಾಗಿ ಖಂಡಿಸಿದ್ದಾರೆ.. ಮ್ಯಾನ್ ಹ್ಯಾಟನ್ ನ ಯೂನಿಯನ್ ಸ್ಕ್ವೇರ್‌ನಲ್ಲಿರುವ ಎಂಟು ಅಡಿ ಎತ್ತರದ ಪ್ರತಿಮೆಯನ್ನು ಕೆಲವು ಅಪರಿಚಿತ ವ್ಯಕ್ತಿಗಳು ವಿರೂಪಗೊಳಿಸಿದ್ದಾರೆ ಎಂದು ನ್ಯೂಯಾರ್ಕ್‌ನಲ್ಲಿರುವ ಕಾನ್ಸುಲೇಟ್ ತಿಳಿಸಿದೆ.
ಮಹಾತ್ಮ ಗಾಂಧಿಯನ್ನು ಯಾರಾದರೂ ಅಗೌರವಿಸುತ್ತಾರೆ ಎಂದರೆ ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ವೈದಿಕ ಗೆಳೆಯರ ಸಂಘದ ಅಧ್ಯಕ್ಷ ಬಲಭದ್ರ ಭಟ್ಟಾಚಾರ್ಯ ದಾಸ(ಬೆನ್ನಿ ಟಿಲ್ಮನ್) ಹೇಳಿದರು.
ಹಿಂದೂ ಪಿಎಸಿಟಿಯ ಕಾರ್ಯನಿರ್ವಾಹಕ ನಿರ್ದೇಶಕ ಉತ್ಸವ್ ಚಕ್ರವರ್ತಿ ಮಾತನಾಡಿ, ಅಮೆರಿಕದಲ್ಲಿ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಇದೇ ಮೊದಲಲ್ಲ. ಕಳೆದ ಕೆಲವು ವರ್ಷಗಳಲ್ಲಿ, ಮಹಾತ್ಮಾ ಗಾಂಧಿಯವರ ಪ್ರತಿಮೆಗಳನ್ನು ತೀವ್ರಗಾಮಿ ಗುಂಪುಗಳು ಧ್ವಂಸಗೊಳಿಸಿವೆ ಎಂದು ಆರೋಪಿಸಿದ್ದಾರೆ.
ಕಳೆದ ವರ್ಷ ಜನವರಿಯಲ್ಲಿ, ಅಪರಿಚಿತ ದುಷ್ಕರ್ಮಿಗಳು ಕ್ಯಾಲಿಫೋರ್ನಿಯಾದ ಉದ್ಯಾನವನದಲ್ಲಿ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ್ದರು,
ಡಿಸೆಂಬರ್ 2020 ರಲ್ಲಿ, ಖಲಿಸ್ತಾನಿ ಬೆಂಬಲಿಗರು ಭಾರತೀಯ ರಾಯಭಾರ ಕಚೇರಿಯ ಮುಂಭಾಗದಲ್ಲಿರುವ ವಾಷಿಂಗ್ಟನ್, DC ಯಲ್ಲಿ ಗಾಂಧಿ ಪ್ರತಿಮೆಯನ್ನು ಅಪವಿತ್ರಗೊಳಿಸಿದ್ದರು.
ಭಾರತದ ಹೊರಗೆ ಅತಿ ಹೆಚ್ಚು ಗಾಂಧಿ ಪ್ರತಿಮೆಗಳು ಅಮೆರಿಕದಲ್ಲಿವೆ. ನ್ಯೂಯಾರ್ಕ್ ಪ್ರತಿಮೆ ವಿಧ್ವಂಸಕ ಕೃತ್ಯದ ತಕ್ಷಣದ ತನಿಖೆಗಾಗಿ, ಕಾರಣರಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ಗೆ ಒತ್ತಾಯಿಸಲಾಗಿದೆ ಎಂದು ಕಾನ್ಸುಲೇಟ್ ಹೇಳಿದೆ.