ಆಸ್ಟ್ರೇಲಿಯಾದ ಮೆಲ್ಬೋರ್ನ್ ಉಪನಗರವಾದ ರೋವಿಲ್ಲೆಯಲ್ಲಿರುವ ಭಾರತೀಯ ಸಮುದಾಯ ಕೇಂದ್ರದಲ್ಲಿ ನವೆಂಬರ್ 12ರಂದು ಪ್ರಧಾನಿ ಸ್ಕಾಟ್ ಮಾರಿಸನ್ ಅನಾವರಣಗೊಳಿಸಿದ್ದ ಮಹಾತ್ಮ ಗಾಂಧಿ ಕಂಚಿನ ಪ್ರತಿಮೆಯನ್ನು ಕೆಲ ದುಷ್ಕರ್ಮಿಗಳು ಶಿರಚ್ಛೇದ ಮಾಡಲು ಯತ್ನಿಸಿದ ಘಟನೆಯು ವರದಿಯಾಗಿದೆ.
ಈ ಪ್ರಕರಣ ಸಂಬಂಧ ಅಪರಿಚಿತ ಆರೋಪಿಗಳ ಪತ್ತೆಗಾಗಿ ಪೊಲೀಸರು ಪ್ರತ್ಯಕ್ಷದರ್ಶಿಗಳು ಅಥವಾ ಸಿಸಿಟಿವಿ ದೃಶ್ಯಾವಳಿ ಹೊಂದಿರುವವರು ಕೂಡಲೇ ತಮ್ಮನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ ಯತ್ನ ಪ್ರಯತ್ನದ ಕುರಿತಂತೆ ತೀವ್ರ ಬೇಸರ ವ್ಯಕ್ತಪಡಿಸಿದ ಪ್ರಧಾನಿ ಸ್ಕಾಟ್ ಮಾರಿಸನ್, ಆಸ್ಟ್ರೇಲಿಯಾವು ವಲಸಿಗರ ಹಾಗೂ ಬಹುಸಂಸ್ಕೃತಿ ರಾಷ್ಟ್ರವಾಗಿದೆ. ಇಂತಹ ನೆಲದಲ್ಲಿ ಸಾಂಸ್ಕೃತಿಕ ಸ್ಮಾರಕಗಳ ಮೇಲೆ ನಡೆದಿರುವ ದಾಳಿಯನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಮಹಾತ್ಮಾ ಗಾಂಧಿ ಪ್ರತಿಮೆಗೆ ಈ ರೀತಿಯಾಗಿ ಅಗೌರವ ತೋರಿದ್ದು ಅತ್ಯಂತ ಅವಮಾನಕರ ಸಂಗತಿಯಾಗಿದೆ. ಇದಕ್ಕೆ ಕಾರಣರಾದವರು ಆಸ್ಟ್ರೇಲಿಯಾದ ಭಾರತೀಯ ಸಮುದಾಯಕ್ಕೇ ಅಗೌರವವನ್ನು ತೋರಿಸಿದ್ದಾರೆ. ಅಲ್ಲದೇ ಈ ರೀತಿ ಕೃತ್ಯ ಎಸಗಿದ್ದಕ್ಕೆ ಅವರಿಗೆ ನಾಚಿಕೆ ಎನಿಸಬೇಕು ಎಂದು ಸ್ಕಾಟ್ ಮಾರಿಸನ್ ಕಿಡಿಕಾರಿದ್ದಾರೆ.
ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಮುದಾಯ ಸುರಕ್ಷತೆ ಹಾಗೂ ಬಹುಸಾಂಸ್ಕೃತಿಕ ವ್ಯವಹಾರಗಳ ಸಹಾಯಕ ಸಚಿವ ಜೇಸನ್ವುಡ್ ಇದೊಂದು ಅವಮಾನಕರ ಕೃತ್ಯ ಎಂದು ಜರಿದಿದ್ದಾರೆ.