ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ವಾಟ್ಸಾಪ್ ಸ್ಟೇಟಸ್ ಮಹಿಳೆಯೊಬ್ಬಳ ಹತ್ಯೆಗೆ ಕಾರಣವಾಗಿದೆ. ಮಹಿಳೆ ಮನೆಗೆ ನುಗ್ಗಿ ಆಕೆಯನ್ನು ಥಳಿಸಿದ್ದಾರೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.
ಮೃತ ಮಹಿಳೆಗೆ 48 ವರ್ಷವೆಂದು ಪೊಲೀಸರು ಹೇಳಿದ್ದಾರೆ. ಮಹಿಳೆಯ 20 ವರ್ಷದ ಮಗಳು ವಾಟ್ಸಾಪ್ ಸ್ಟೇಟಸ್ ಹಾಕಿದ್ದಳಂತೆ. ಅದ್ರಲ್ಲಿ ಆಕೆ ಸಂದೇಶ ಬರೆದಿದ್ದಳು ಎನ್ನಲಾಗಿದೆ. ಆಕೆಯ ಸ್ನೇಹಿತರ ಕುಟುಂಬದವರಿಗೆ ಇದು ಇಷ್ಟವಾಗಲಿಲ್ಲ. ತಮಗೆ ಅವಮಾನ ಮಾಡಲು ಈ ಸ್ಟೇಟಸ್ ಹಾಕಲಾಗಿದೆ ಎಂದು ಅವರು ಕೋಪಗೊಂಡಿದ್ದಾರಂತೆ.
ನಂತ್ರ ಮನೆಗೆ ನುಗ್ಗಿದ ಅವರು ಮಹಿಳೆಯನ್ನು ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ಲೀಲಾವತಿ ದೇವಿ ಪ್ರಸಾದ್ ಗೆ ಗಂಭೀರ ಗಾಯಗಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಂತೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.
ಮೃತ ಮಹಿಳೆ ಮಗಳು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಗಳ ಸ್ನೇಹಿತರ ಮನೆಯವರನ್ನು ಬಂಧಿಸಿದ್ದಾರೆ. ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ನೇಹಿತರ ಕುಟುಂಬಸ್ಥರಿಗೆ ಅವಮಾನ ಮಾಡಲು ನಾನು ಸ್ಟೇಟಸ್ ಹಾಕಿರಲಿಲ್ಲವೆಂದು ಮೃತಳ ಮಗಳು ಪೊಲೀಸ್ ಮುಂದೆ ಹೇಳಿಕೆ ನೀಡಿದ್ದಾಳೆ.