ಮುಂಬೈ: ಕುಟುಂಬದವರ ಹಿಂಸೆ, ಪತಿ ಥಳಿತದಿಂದ ಬೇಸತ್ತ ಮಹಿಳೆ ತನ್ನ 6 ಮಕ್ಕಳನ್ನು ಬಾವಿಗೆ ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಅಮಾನವೀಯ ಘಟನೆ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಖಾರವಲಿ ಗ್ರಾಮದಲ್ಲಿ ನಡೆದಿದೆ.
ಐದು ಹೆಣ್ಣು ಮಕ್ಕಳು, ಓರ್ವ ಬಾಲಕನನ್ನು ಮಹಿಳೆ ಬಾವಿಗೆ ಎಸೆದಿದ್ದು, ಬಾವಿಯಿಂದ ಮೇಲೆ ಬರಲಾಗದೇ 6 ಮಕ್ಕಳು ಮೃತಪಟ್ಟಿದ್ದಾರೆ. ಮಹಿಳೆಯನ್ನು ರಕ್ಷಿಸಲಾಗಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆ ಈ ಕೃತ್ಯವೆಸಗಿದ್ದಾಳೆ ಎನ್ನಲಾಗಿದೆ.
30 ವರ್ಷದ ಮಹಿಳೆಗೆ ಆಕೆಯ ಗಂಡ ಹಾಗೂ ಮನೆಯವರು ಪ್ರತಿದಿನ ಹಿಂಸಿಸುತ್ತಿದ್ದರು. ಅನಗತ್ಯ ಜಗಳ-ಕಿರಿಕಿರಿ, ಹಲ್ಲೆಯಿಂದಾಗಿ ನೊಂದಿದ್ದ ಮಹಿಳೆ ಬೇರೆ ದಾರಿ ಕಾಣದೇ ಮಕ್ಕಳನ್ನು ಕೊಂದು ತಾನೂ ಸಾಯಬೇಕು ಎಂದು ನಿರ್ಧರಿಸಿ ಹೀಗೆ ಮಾಡಿದ್ದಾಳೆ. ಮಕ್ಕಳನ್ನು ಕೊಂದ ಆರೋಪದಲ್ಲಿ ಇದೀಗ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಶೋಕ್ ದುಧೆ ತಿಳಿಸಿದ್ದಾರೆ.