ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಟಿವಿ ಆಫ್ ಮಾಡಿದ್ದಕ್ಕೆ ಅತ್ತೆಯ ಮೂರು ಬೆರಳುಗಳನ್ನು ಕಚ್ಚಿದ ಮಹಿಳೆ ಪತಿಗೆ ಕಪಾಳಮೋಕ್ಷ ಮಾಡಿದ್ದಾರೆ.
ತನ್ನ 60 ವರ್ಷದ ಅತ್ತೆ ದೂರದರ್ಶನ ಸೆಟ್ ಆಫ್ ಮಾಡಿದ್ದು, ಆಕ್ರೋಶಗೊಂಡ ಸೊಸೆ ಅವರ ಮೂರು ಬೆರಳುಗಳನ್ನು ಕಚ್ಚಿದ್ದಾಳೆ.
ಸೋಮವಾರ ಬೆಳಗ್ಗೆ ವೃಶಾಲಿ ಕುಲಕರ್ಣಿ ಅವರು ತಮ್ಮ ಮನೆಯಲ್ಲಿ ಭಜನೆ ಪಠಿಸುತ್ತಿದ್ದಾಗ ಅವರ 32 ವರ್ಷದ ಸೊಸೆ ವಿಜಯಾ ಕುಲಕರ್ಣಿ ದೂರದರ್ಶನ ವೀಕ್ಷಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಶಿವಾಜಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
‘ಸೋಮವಾರ ಬೆಳಗ್ಗೆ ವೃಶಾಲಿ ವಿಜಯಾ ಅವರು ಭಜನೆ ಹಾಡುತ್ತಿದ್ದರಿಂದ ದೂರದರ್ಶನದ ಸದ್ದು ಕಡಿಮೆ ಮಾಡುವಂತೆ ಹೇಳಿದ್ದಾರೆ. ಈ ವೇಳೆ ಅತ್ತೆ ಸೊಸೆ ನಡುವೆ ಜಗಳವಾಗಿದೆ. ವೃಶಾಲಿ ಟೆಲಿವಿಷನ್ ಸೆಟ್ ಆಫ್ ಮಾಡಿದಾಗ ಸೊಸೆ ವೃದ್ಧೆಯ ಕೈ ಹಿಡಿದು ಮೂರು ಬೆರಳುಗಳನ್ನು ಕಚ್ಚಿದ್ದಾಳೆ. ಮಧ್ಯಪ್ರವೇಶಿಸಲು ಯತ್ನಿಸಿದ ಪತಿಗೂ ಕಪಾಳಮೋಕ್ಷ ಮಾಡಿದ್ದಾಳೆ ಎಂದು ಹೇಳಿದ್ದಾರೆ.
ಗಾಯಾಳು ವೃಶಾಲಿ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಮಹಿಳೆ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.