
ಮುಂಬೈ: ಏಕನಾಥ್ ಶಿಂಧೆ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಮಾಡಿದ್ದು ನಾನೇ ಎಂದು ಡಿಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಏಕನಾಥ್ ಶಿಂಧೆ ಅವರನ್ನು ಮಹಾರಾಷ್ಟ್ರ ಸಿಎಂ ಮಾಡಲು ಕೇಂದ್ರ ಬಿಜೆಪಿ ನಾಯಕತ್ವಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ. ಪಕ್ಷದ ವರಿಷ್ಠರ ಆದೇಶದ ಮೇರೆಗೆ ನಾನು ಉಪ ಮುಖ್ಯಮಂತ್ರಿ ಸ್ಥಾನ ಒಪ್ಪಿಕೊಂಡೆ ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಹೊಸ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ನೇಮಕಗೊಂಡ ನಂತರ ಅವರ ತವರು ನಗರಕ್ಕೆ ಇಂದು ಮೊದಲ ಭೇಟಿ ನೀಡಿದ್ದು, ಶಿಂಧೆ ಅವರನ್ನು ಸಿಎಂ ಮಾಡುವುದು ನನ್ನ ಪ್ರಸ್ತಾಪವಾಗಿತ್ತು. ಶಿಂಧೆ ಯಶಸ್ವಿ ಸಿಎಂ ಆಗುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಎಂದು ತಿಳಿಸಿದ್ದಾರೆ.
ನಾನು ಮನವಿ ಮಾಡಿದ್ದರೆ ಸಿಎಂ ಆಗಬಹುದಿತ್ತು. ಸಿದ್ದಾಂತಕ್ಕಾಗಿ ಶಿವಸೇನೆಯವರನ್ನು ಸಿಎಂ ಮಾಡಿದ್ದೇವೆ. ಶಿಂಧೆ ಅವರನ್ನು ಸಿಎಂ ಮಾಡಬೇಕೆಂಬುದು ನನ್ನ ಪ್ರಸ್ತಾಪವಾಗಿತ್ತು. ಆದರೆ, ನಾನು ಸರ್ಕಾರದಿಂದ ಹೊರಗುಳಿದರೆ ಆಡಳಿತ ನಡೆಸಲು ಸರಿಯಾಗಲ್ಲ ಎಂದು ಪಕ್ಷದ ಹಿರಿಯ ನಾಯಕರು ಪಟ್ಟು ಹಿಡಿದಿದ್ದರಿಂದ ಅವರ ಆದೇಶದ ಮೇರೆಗೆ ನಾನು ಡಿಸಿಎಂ ಆಗಲು ಒಪ್ಪಿಕೊಂಡೆ ಎಂದು ಹೇಳಿದ್ದಾರೆ.